ಮಡಿಕೇರಿ, ಜೂ. 11: ಮಡಿಕೇರಿಯ ಕರ್ಣಂಗೇರಿ ಗ್ರಾಮದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹೊಂದಿಕೊಂಡಿರುವ ಸರಕಾರಿ ಜಾಗದಲ್ಲಿ ಅಕ್ರಮ ಗುಡಿಸಲು ನಿರ್ಮಿಸಲು ವ್ಯಕ್ತಿಯೊಬ್ಬರು ಯತ್ನಿಸಿರುವ ಬಗ್ಗೆ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ ಅಕ್ರಮ ಗುಡಿಸಲು ತೆರವಿಗೆ ಕೋರಿದ್ದಾರೆ.

ಇನ್ನೊಂದೆಡೆ ಮದೆ ಗ್ರಾ.ಪಂ. ವ್ಯಾಪ್ತಿಯ ಕಾಟಕೇರಿ ಬಳಿಯ ಉಡೋತ್‍ಮೊಟ್ಟೆ ಸ.ನಂ. 303/3ರ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳು ತಲೆಯೆತ್ತುತ್ತಿವೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇಂದು ಯಾರೋ ಅಪರಿಚಿತರು ಅಲ್ಲಿಗೆ ಇಟ್ಟಿಗೆ, ಮರಳು ಇತ್ಯಾದಿ ತಂದು ದಿಢೀರ್ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಗ್ರಾ.ಪಂ. ಅಥವಾ ರಾಜಕೀಯ ನೆರಳಿನಲ್ಲಿ ಅತಿಕ್ರಮಣ ನಡೆಯುತ್ತಿರುವ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸ್ಥಳ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.