ಮಡಿಕೇರಿ, ಜೂ. 12: ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮುಂಗಾರು ವರ್ಷಾಧಾರೆಯ ಬಿರುಸು ಇನ್ನೂ ಕಡಿಮೆಯಾಗಿಲ್ಲ. ವಾಯು- ವರುಣನ ಅಬ್ಬರದಿಂದಾಗಿ ನದಿ - ತೊರೆಗಳಲ್ಲಿ ನೀರಿನ ಮಟ್ಟ ಏರಿಕೆ ಯಾಗುತ್ತಲೇ ಇದೆ. ಇದರೊಂದಿಗೆ ಅಲ್ಲಲ್ಲಿ ಬರೆಕುಸಿತ, ಮರಗಳು ಉರುಳಿ ಬೀಳುತ್ತಿರುವ ಸನ್ನಿವೇಶ ಜೂನ್ 12ರ ಮಂಗಳವಾರದಂದೂ ಮುಂದುವರಿ ದಿತ್ತು. ಮಡಿಕೇರಿ ಸುತ್ತಮುತ್ತ ಸೋಮವಾರಪೇಟೆ ಮೊದಲಾದೆಡೆ ಮಳೆ ನಡು ನಡುವೆ ವಿರಾಮ ನೀಡಿದಂತಿದ್ದು, ಬಿಸಿಲಿನ ಕಿರಣಗಳು ಗೋಚರಿಸಿದ ಕುರಿತು ವರದಿಯಾಗಿದ್ದರೂ ಮತ್ತೆ ಆಗಿಂದಾಗೆ ಭಾರೀ ಮಳೆ ಬಿದ್ದಿದೆ.

ಆದರೆ, ದಕ್ಷಿಣ ಕೊಡಗಿನ ಗಡಿ ಪ್ರದೇಶ ಕುಟ್ಟ, ಟಿ.ಶೆಟ್ಟಿಗೇರಿ, ಬಾಳೆಲೆ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ರಭಸ ಯಥಾ ಸ್ಥಿತಿಯಲ್ಲಿ ಮುಂದುವರಿದಿದ್ದು, ಜನತೆಯ ಆತಂಕ ಇನ್ನೂ ಕಡಿಮೆಯಾಗಿಲ್ಲ. ವರ್ಷಾ ಧಾರೆಯಿಂದಾಗಿ ನಲುಗುತ್ತಿರುವ ಜಿಲ್ಲೆಯ ಹಲವು ಕಡೆಗಳಲ್ಲಿ ನದಿ - ತೊರೆ - ತೋಡುಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಟಿ. ಶೆಟ್ಟಿಗೇರಿಯಲ್ಲಿ ಲಕ್ಷ್ಮಣ ತೀರ್ಥ ಉಕ್ಕಿ ಹರಿದಿದೆ. ಕುಟ್ಟದ ಪೂಜೆಕಲ್ ಭರ್ತಿಯಾಗಿದೆ. ನಾಪೋಕ್ಲು ವಿಭಾಗದಲ್ಲಿಯೂ ಮಳೆಯಾಗುತ್ತಿದೆ. ಅಲ್ಲಲ್ಲಿ ಬರೆ ಕುಸಿತ, ರಸ್ತೆ ಕುಸಿತ, ಮರಗಳು ಬಿದ್ದಿರುವ ಕುರಿತು ಕೇಳಿ ಬಂದಿದ್ದು, ವಿದ್ಯುತ್ ಸಮಸ್ಯೆ ಬಹುತೇಕ ಕಡೆಗಳಲ್ಲಿ ಮುಂದು ವರಿದಿದೆ. ತಾ. 12 ರಂದು ಜಿಲ್ಲೆಯಲ್ಲಿನ ಶಾಲಾ - ಕಾಲೇಜುಗಳನ್ನು ಎಂದಿನಂತೆ ತೆರೆಯುವ ನಿರ್ಧಾರಕ್ಕೆ ನಿನ್ನೆ ಜಿಲ್ಲಾಡಳಿತ ಮುಂದಾಗಿತ್ತು. ಆದರೆ ತಾ. 11ರ ರಾತ್ರಿಯಿಂದ ಮತ್ತೆ ಮಳೆ ಬಿರುಸುಗೊಂಡಿದ್ದ ಹಿನ್ನೆಲೆಯಲ್ಲಿ ಕುಟ್ಟ, ಟಿ. ಶೆಟ್ಟಿಗೇರಿ, ಶ್ರೀಮಂಗಲ ಹಾಗೂ ನಾಪೋಕ್ಲು ಕ್ಲಸ್ಟರ್ ವಿಭಾಗದ ಶಾಲೆಗಳಿಗೆ ಇಂದು ಬೆಳಿಗ್ಗೆ ಮತ್ತೆ ರಜೆ ಘೋಷಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಉಳಿದಂತೆ ಜಿಲ್ಲೆಯ ಇನ್ನಿತರ ಕಡೆಗಳಲ್ಲಿ ಶಾಲಾ - ಕಾಲೇಜುಗಳು ಎಂದಿನಂತೆ ನಡೆದಿವೆ. ವಿದ್ಯುತ್ ಸಮಸ್ಯೆ ಜಿಲ್ಲೆಯ ಎಲ್ಲೆಡೆಗಳಲ್ಲಿ ಸಾಮಾನ್ಯವಾಗಿದೆ. ಮಳೆಯ ತೀವ್ರತೆಯಿಂದಾಗಿ ಸಹಜವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸ್ಥಳಗಳಲ್ಲಿ ಇಂತಹ ಪರಿಸ್ಥಿತಿ ಈ ದಿನ ಉದ್ಭವವಾಗಿರಲಿಲ್ಲ. ಆದರೂ ಈ ತನಕ ಸುರಿದಿರುವ

(ಮೊದಲ ಪುಟದಿಂದ) ಮಳೆ ಇನ್ನೂ ವಿರಾಮ ನೀಡದಿರುವ ಪರಿಣಾಮವಾಗಿ ವ್ಯಾಪಕ ಹಾನಿ ಸಂಭವಿಸಿರುವ ಕುರಿತು ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ದೂರುಗಳು ಬರುತ್ತಿವೆ. ಕುಟ್ಟದಲ್ಲಿ ವಿದ್ಯುತ್ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ಲೈನ್‍ಮ್ಯಾನ್ ಗೌಡ ಎಂಬವರು ವಿದ್ಯುದಾಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ.

ತಾ. 12 ರಂದು ಜಿಲ್ಲಾಡಳಿತದ ಕಂಟ್ರೋಲ್‍ಗೆ ಬಂದಿರುವ ದೂರುಗಳ ಪ್ರಕಾರ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದಲ್ಲಿ ವೆಂಕಟೇಶ್ ಅಲಿಯಾಸ್ ಕಾರ್ಯಪ್ಪ ಎಂಬವರ ಮನೆಯ ಹಿಂಭಾಗದ ಬರೆ ಕುಸಿತಗೊಂಡು ಮನೆಗೆ ಜಖಂ ಆಗಿದೆ. ಇದರಿಂದ ಅಂದಾಜು ರೂ. 40 ಸಾವಿರ ನಷ್ಟ ಸಂಭವಿಸಿದ್ದರೆ, ಇದೇ ಗ್ರಾಮದ ಧರ್ಮಪ್ಪ ಎಂಬವರ ಮನೆಯ ತಡೆಗೋಡೆ ಕುಸಿದು ಇದರಿಂದಲೂ ರೂ. 40 ಸಾವಿರ ನಷ್ಟವುಂಟಾಗಿದೆ. ಶಾಂತಳ್ಳಿಯ ರತ್ನ ಮೋಟಯ್ಯ ಎಂಬವರ ಮನೆಯ ಸುಮಾರು 200 ಹೆಂಚುಗಳು ಗಾಳಿಯ ರಭಸಕ್ಕೆ ಹಾರಿ ಹೋಗಿದ್ದು, ನಷ್ಟ ಸಂಭವಿಸಿದೆ. ವೀರಾಜಪೇಟೆ ನೆಹರೂ ನಗರದಲ್ಲಿ ಅಲ್ಲಿನ ಬಲ್ಲುಡ ಪೊನ್ನಣ್ಣ ಎಂಬವರ ಮನೆಯ ಗೋಡೆ ಕುಸಿದಿದ್ದು, ರೂ. 20 ಸಾವಿರ ನಷ್ಟವುಂಟಾಗಿದೆ.

ಹುದಿಕೇರಿ ವ್ಯಾಪ್ತಿಯಲ್ಲಿ ದಾಖಲೆಯ ಮಳೆ

ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ದಾಖಲೆಯ 8.64 ಇಂಚು ಮಳೆಯಾಗಿದೆ. ಶ್ರೀಮಂಗಲದಲ್ಲಿಯೂ 7.16 ಇಂಚು ಮಳೆಯಾದ್ದರೆ, ಶಾಂತಳ್ಳಿಯಲ್ಲಿ 6.84, ನಾಪೋಕ್ಲು ವಿಭಾಗದಲ್ಲಿ 5.04 ಇಂಚು, ಸೋಮವಾರಪೇಟೆ 5.52 ಹಾಗೂ ಶನಿವಾರಸಂತೆಯಲ್ಲಿ 4 ಇಂಚು ಮಳೆಯಾಗಿರುವದು ಕಳೆದ 24 ಗಂಟೆಗಳ (ಮಂಗಳವಾರ ಬೆ. 8.30) ವಿವರವಾಗಿದೆ.