ಸೋಮವಾರಪೇಟೆ,ಜೂ.12: ಕುಟುಂಬಸ್ಥರು-ಗುರುಹಿರಿಯರು ನಿಶ್ಚಯಿಸಿದ್ದ ವಿವಾಹ ಅದ್ದೂರಿಯಾಗಿ ನಡೆದು 4 ವರ್ಷ ಕಳೆಯುವಷ್ಟರಲ್ಲೇ ಫೇಸ್‍ಬುಕ್‍ನಿಂದ ಎದುರಾದ ಜಗಳದಲ್ಲಿ ದಂಪತಿ ಇಹಲೋಕ ತ್ಯಜಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸೋಮವಾರಪೇಟೆಯ ಅರೆಯೂರಿನಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಯಿತು.

ಈ ದಂಪತಿಗೆ ಎರಡು ವರ್ಷದ ಪುತ್ರನಿದ್ದು, ಅಪ್ಪ-ಅಮ್ಮನನ್ನು ಕಳೆದುಕೊಂಡ ಮಗು ಇದೀಗ ಸಂಬಂಧಿಕರ ಮಡಿಲು ಸೇರಿದೆ. ಫೇಸ್‍ಬುಕ್‍ನಲ್ಲಿ ಪತ್ನಿ ಹಾಕುತ್ತಿದ್ದ ಫೋಟೋ ಮತ್ತು ಸ್ಟೇಟಸ್‍ಗಾಗಿಯೇ ಉಂಟಾದ ಕೌಟುಂಬಿಕ ಕಲಹ ಎರಡು ಜೀವಗಳನ್ನು ಬಲಿತೆಗೆದು ಕೊಂಡು ದುರಂತ ಅಂತ್ಯ ಕಂಡಿದೆ.

ಸೋಮವಾರಪೇಟೆಯ ಅರೆಯೂರು ಗ್ರಾಮದ ದಿ. ವಿ.ಸಿ. ಪುಟ್ಟಣ್ಣ ಮತ್ತು ಜಾನಕಿ ದಂಪತಿಯ ಪುತ್ರ ಅನೂಪ್(32) ಮತ್ತು ಸಕಲೇಶಪುರದ ಮಂಜೂರು ಗ್ರಾಮದ ಸೌಮ್ಯ(28) ಅವರುಗಳೇ ದುರಂತ ಅಂತ್ಯ ಕಂಡ ದಂಪತಿಗಳಾಗಿದ್ದು, ಇವರ 2 ವರ್ಷ ಪ್ರಾಯದ ಮಗು ಆತಿಕ್ ಗೌಡ ಎಳೆಯ ಪ್ರಾಯದಲ್ಲೇ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದಾನೆ.

ಪಿಯುಸಿ ವಿದ್ಯಾಭ್ಯಾಸದ ನಂತರ ಬೆಂಗಳೂರು ಸೇರಿದ್ದ ಅನೂಪ್ ಕೋಳಿ ಆಹಾರ ಉತ್ಪನ್ನ ಕಾರ್ಖಾನೆ ಯಲ್ಲಿ ಉಪ ವ್ಯವಸ್ಥಾಪಕನಾಗಿದ್ದ. ಕಳೆದ ಮೂರೂವರೆ ವರ್ಷಗಳ ಹಿಂದೆ ಸೌಮ್ಯ ಅವರೊಂದಿಗೆ ವಿವಾಹವಾಗಿ ಬೆಂಗಳೂರಿನ ಬಗಲಗುಂಟೆ ಸಮೀಪದ ಹಾವನೂರು ಲೇಔಟ್‍ನಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದರು.

ಈ ಮಧ್ಯೆ ಸೌಮ್ಯ ಅವರು ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಹಾಕುತ್ತಿದ್ದ ಫೋಟೋ ಹಾಗೂ ಸ್ಟೇಟಸ್‍ಗಳ ಬಗ್ಗೆ ಪತಿ ಅನೂಪ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದ್ದು, ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಕಳೆದ ಭಾನುವಾರವೂ ಸಹ ದಂಪತಿ ನಡುವೆ ಜಗಳ ಏರ್ಪಟ್ಟಿದ್ದು, ಈ ಸಂದರ್ಭ ಅನೂಪ್ ಅವರು ತನ್ನ ಪತ್ನಿಯ ಸಹೋದರ ರವಿ ಅವರಿಗೆ ಕರೆ ಮಾಡಿ, ಜಗಳದ ವಿಷಯ ತಿಳಿಸಿ, ಪತ್ನಿಯನ್ನು ಕರೆದೊಯ್ಯುವಂತೆ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಸಹೋದರ ರವಿ ಅವರು ಸೌಮ್ಯ ಅವರಿಗೆ ಕರೆ ಮಾಡಿದ ಸಂದರ್ಭ ಕರೆ ಸ್ವೀಕಾರ ಗೊಂಡಿಲ್ಲ. ಇದರಿಂದ ಗಾಬರಿಯಾದ ರವಿ ಅವರು, ಸಹೋದರಿ ಬಾಡಿಗೆಗಿದ್ದ ಮನೆ ಬಳಿ ತೆರಳಿದ್ದಾರೆ. ಒಳಗಿನಿಂದ ಬಾಗಿಲು ಮುಚ್ಚಿದ್ದರಿಂದ ಕಿಟಕಿ ಮೂಲಕ ಇಣುಕಿದಾಗ ಈರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವದು ಗೋಚರಿಸಿದೆ. ಅಪ್ಪ ಅಮ್ಮನ ದುರಂತ ಅಂತ್ಯ ಅರಿಯದ ಪುಟಾಣಿ ಮಗು ಮನೆಯ ಮುಂಭಾಗದ ಕೊಠಡಿಯಲ್ಲಿ ಅಳುತ್ತಾ ಕುಳಿತಿದ್ದುದು ಕಂಡುಬಂದಿದೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ಅರೆಯೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ದೇವಾಲಯದ ವಾರ್ಷಿಕ ಪೂಜೋತ್ಸವಕ್ಕೆ ಮಗುವಿನೊಂದಿಗೆ ಆಗಮಿಸಿ ಸಂಭ್ರಮದಿಂದ ತೆರಳಿದ್ದ ಅನೂಪ್ ಮತ್ತು ಸೌಮ್ಯ ದಂಪತಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಜೀವನಕ್ಕೆ ವಿದಾಯ ಹೇಳಿ ಶವವಾಗಿ ಆಗಮಿಸಿದ್ದು, ಸಂಬಂಧಿಕರ ರೋಧನ ಮುಗಿಲುಮುಟ್ಟುವಂತೆ ಮಾಡಿತು. ಫೇಸ್‍ಬುಕ್‍ನಿಂದ ಉಂಟಾದ ಮನಸ್ತಾಪ, ಆಕ್ಷೇಪಗಳು ಸಂತೋಷ ದಿಂದ ಕೂಡಿದ್ದ ಜೀವನವನ್ನೇ ಬಲಿ ಪಡೆಯಿತು. ಮೃತರ ಅಂತ್ಯಕ್ರಿಯೆ ಯನ್ನು ಅರೆಯೂರು ಗ್ರಾಮದಲ್ಲಿ ನೆರವೇರಿಸಲಾಯಿತು.