ಭಾಗಮಂಡಲ, ಜೂ. 12: ಜಾಗತಿಕ ತಾಪ ಹೆಚ್ಚಾಗಲು ಪರಿಸರ ನಾಶ ಮುಖ್ಯ ಕಾರಣವಾಗುತ್ತಿದೆ. ಮಾನವನ ಚಟುವಟಿಕೆಗಳಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯಗಳು ನದಿನೀರಿಗೆ ಸೇರುವದರಿಂದ ನದಿ ಮೂಲಗಳು ಕಲುಷಿತಗೊಳ್ಳುತ್ತಿವೆ. ಪರಿಸರ ಜಾಗೃತಿಯೊಂದಿಗೆ ಜಲಮೂಲಗಳ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಜಾಗತಿಕ ತಾಪಮಾನವನ್ನು ಕುಗ್ಗಿಸಬೇಕಾಗಿದೆ ಎಂದು ಭಾಗಮಂಡಲ ವಲಯ ಅರಣ್ಯಾಧಿಕಾರಿ ಎಂ.ಎಸ್. ಚೆಂಗಪ್ಪ ಹೇಳಿದರು.

ಭಾಗಮಂಡಲದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಮಡಿಕೇರಿ ಪ್ರಾದೇಶಿಕ ಅರಣ್ಯ ವಿಭಾಗ, ಭಾಗಮಂಡಲ ವಲಯ ಮಡಿಕೇರಿ ವನ್ಯಜೀವಿ ವಿಭಾಗದ ತಲಕಾವೇರಿ ವನ್ಯಜೀವಿ ವಲಯ ಹಾಗೂ ಕೆ.ವಿ.ಜಿ. ಕೈಗಾರಿಕಾ ತರಬೇತಿ ಸಂಸ್ಥೆ ಭಾಗಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೆವಿಜಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ವಿ. ಶ್ರೀಕಾಂತ್ ಜಾಥಾ ಉದ್ಘಾಟಿಸಿದರು. ಬಳಿಕ ಮುಖ್ಯ ಬೀದಿಯಲ್ಲಿ ಜನಜಾಗೃತಿ ಜಾಥಾ ನಡೆಯಿತು. ತಲಕಾವೇರಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಸ್ವಾಗತಿಸಿದರು. ಭಾಗಮಂಡಲ ವಲಯ ಅರಣ್ಯಾಧಿಕಾರಿ ವಂದಿಸಿದರು. ಭಾಗಮಂಡಲ ಪಂಚಾಯಿತಿ ಪಿಡಿಒ ಅಶೋಕ್ ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್, ಉಪವಲಯ ಅರಣ್ಯಾಧಿಕಾರಿ ಶಶಿ, ಎಂ.ಬಿ. ಸುರೇಶ್, ಉಮೇಶ್, ಆನಂದ, ಕೆ.ವಿ.ಜಿ ವಿದ್ಯಾಸಂಸ್ಥೆಯ ಉಪನ್ಯಾಸಕ ವೃಂದ, ಅಟಲ್ ಬಿಹಾರಿ ವಾಜಪೇಯಿ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕ ವೃಂದ, ಭಾಗಮಂಡಲ ಹಾಗೂ ತಲಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರು, ಚಾಲಕರು ಭಾಗವಹಿಸಿದ್ದರು.