ಕೂಡಿಗೆ, ಜೂ. 12: ಸೀಗೆಹೊಸೂರು ವ್ಯಾಪ್ತಿಯ ಅರಣ್ಯ ದಂಚಿನಲ್ಲಿ ತೋಡಿ ರುವ ಕಂದಕವನ್ನು ದಾಟುವ ಸಂದರ್ಭ ಮರಿಯಾನೆ ಯೊಂದು ಕಂದಕ ದೊಳಕ್ಕೆ ಬಿದ್ದ ಘಟನೆ ನಡೆದಿದೆ. ಕಂದಕ ನಿರ್ಮಿಸುವ ಸಂದರ್ಭ ಬಂಡೆಯೊಂದು ಅಡ್ಡಸಿಕ್ಕ ಪರಿಣಾಮ ಆ ಬಂಡೆಯನ್ನು ಸಿಡಿಸದೆ ಹಾಗೆ ಬಿಟ್ಟು ಕಂದಕವನ್ನು ತೋಡಲಾಗಿದೆ. ಇದರ ಪರಿಣಾಮ ಕಳೆದೆರಡು ದಿನಗಳಿಂದ ಬಾಣಾವರ ಮೀಸಲು ಅರಣ್ಯದಲ್ಲಿನ ಎರಡು ಮರಿಯಾನೆ ಸೇರಿದಂತೆ ನಾಲ್ಕು ಕಾಡಾನೆಗಳು ಬಂಡೆಯ ಸಹಾಯದಿಂದ ಕಂದಕವನ್ನು ದಾಟಿ, ಸೀಗೆಹೊಸೂರು ವ್ಯಾಪ್ತಿಯ ಜಮೀನುಗಳಿಗೆ ನುಗ್ಗಿ, ಬೆಳೆಯನ್ನು ನಾಶ ಪಡಿಸುತ್ತಿದ್ದವು. ಜಮೀನುಗಳಲ್ಲಿ ಸುತ್ತಾಡಿರುವ ಆನೆಗಳು ಮತ್ತೆ ಬಂದ ದಾರಿಯಲ್ಲೇ ಅರಣ್ಯಕ್ಕೆ ತೆರಳುತಿದ್ದವು. (ಮೊದಲ ಪುಟದಿಂದ) ಸೋಮವಾರ ಸಂಜೆ ಜಮೀನಿಗೆ ಲಗ್ಗೆ ಇಡಲು ಕಾಡಾನೆಗಳು ಕಂದಕವನ್ನು ದಾಟುವ ಸಂದರ್ಭ ಮರಿ ಆನೆಯೊಂದು ಕಂದಕಕ್ಕೆ ಬಿದ್ದಿದೆ. ತಕ್ಷಣ ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಕಂದಕದೊಳಗೆ ಬಿದ್ದಿದ್ದ ಮರಿಯಾನೆಯನ್ನು ಮೇಲೆ ಹತ್ತಿಸಲು ಪ್ರಯತ್ನಿಸುತ್ತಿದ್ದಂತೆಯೇ ಸ್ಥಳದಲ್ಲೆ ಇದ್ದ ಮರಿಆನೆಯ ತಾಯಿ ಕಾಡಾನೆ ಸಿಬ್ಬಂದಿಗಳನ್ನು ಬೆನ್ನಟ್ಟಿದ ಪ್ರಸಂಗವೂ ನಡೆಯಿತು.

ಕಂದಕದೊಳಗೆ ನೀರು ತುಂಬಿದ್ದರಿಂದ ಮರಿ ಆನೆ ಮೇಲೆ ಹತ್ತಲು ಪ್ರಯತ್ನಿಸಿದರೂ ಆಗುತ್ತಿರಲಿಲ್ಲ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಮರಿ ಆನೆಯನ್ನು ಮೇಲೆತ್ತಿ ಬಳಿಕ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಿದರು.

ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಲಕ್ಷ್ಮಿಕಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಬ್ಬಾಲೆ ಉಪವಲಯ ಅರಣ್ಯಾಧಿಕಾರಿ ಸತೀಶ್, ಅರಣ್ಯ ರಕ್ಷಕರಾದ ಹೆಚ್.ಪಿ.ರಾಜಣ್ಣ, ರಾಜಪ್ಪ, ಲೋಕೇಶ್, ತಮ್ಮಯ್ಯ ಹಾಗೂ ಸಿಬ್ಬಂದಿ ಇದ್ದರು.