ಗೋಣಿಕೊಪ್ಪ ವರದಿ, ಜೂ. 12: ಅರಣ್ಯದಿಂದ ಕಾಡಾನೆಗಳು ನಾಡಿಗೆ ಬಾರದಂತೆ ತಡೆಗಟ್ಟಲು ಸಂಪೂರ್ಣವಾಗಿ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಬೇಕು ಎಂದು ಮಾಯಮುಡಿ, ಬಾಳೆಲೆ, ಪೊನ್ನಪ್ಪಸಂತೆ ಹಾಗೂ ನಿಟ್ಟೂರು ಗ್ರಾಮಸ್ಥರು ಆಗ್ರಹಿಸಿದರು.

ಮಾಯಮುಡಿ ಕಂಗಳತ್‍ನಾಡ್ ಮಹಿಳಾ ಸಮಾಜ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಾನಂಡ ಪ್ರತ್ಯು ಅಧ್ಯಕ್ಷತೆಯಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಸಮ್ಮುಖದಲ್ಲಿ ನಡೆದ ಕಾಡಾನೆ-ಮಾನವ ಸಂಘರ್ಷದ ಸಲಹಾ ಸಭೆಯಲ್ಲಿ ಆಗ್ರಹಿಸಲಾಯಿತು. ರೈಲ್ವೆ ಕಂಬಿ ನಿರ್ಮಾಣ ಯೋಜನೆ ಯಶಸ್ಸು ಕಾಣುತ್ತಿರುವದರಿಂದ ಅರಣ್ಯ ಇಲಾಖೆ ಅರಣ್ಯ ಪ್ರದೇಶದ ಸುತ್ತಲೂ ರೈಲ್ವೆ ಕಂಬಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ರೈಲ್ವೆ ಕಂಬಿ ನಿರ್ಮಾಣದಿಂದ ಕಾಡಾನೆಗಳಿಗೆ ಒಳ ನುಗ್ಗಲು ಆಗುತ್ತಿಲ್ಲ. ಆದರೆ, ಯೋಜನೆ ಪೂರ್ಣವಾಗಿ ಅನುಷ್ಠಾವಾಗದೆ ಉಳಿದಿರುವದರಿಂದ ಅಂತಹ ಕಡೆಗಳಿಂದ ಆನೆಗಳು ಒಳಬರುತ್ತಿವೆ. ಇದನ್ನೂ ಸಂಪೂರ್ಣ ವಾಗಿ ತಡೆಗಟ್ಟಲು ಈ ಯೋಜನೆ ಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಕಾಫಿ ಬೆಳೆಗಾರರುಗಳಾದ ಅರಮಣಮಾಡ ರಂಜನ್ ಚೆಂಗಪ್ಪ, ಟಾಟು ಮೊಣ್ಣಪ್ಪ ಆಗ್ರಹಿಸಿದರು.

ನಾಗರಹೊಳೆ ಎಸಿಎಫ್ ಪೌಲ್ ಆಂಥೋನಿ ಮಾತನಾಡಿ, ಈಗಾಗಲೇ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ 26 ಕಿ. ಮೀ. ನಷ್ಟು ರೈಲ್ವೆ ಕಂಬಿ ಅಳವಡಿಸಲಾಗಿದೆ. 28 ಕಿ. ಮೀ. ನಷ್ಟು ಅನುಷ್ಠಾನ ಆಗಬೇಕಿದೆ. ವೀರಹೊಸಳ್ಳಿ ಹಾಗೂ ಮತ್ತಿಗೋಡು ಭಾಗದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಹಂತ ಹಂತವಾಗಿ ರೈಲ್ವೆ ಕಂಬಿ ಯೋಜನೆ ಅನುಷ್ಠಾನವಾಗುತ್ತಿದೆ ಎಂದರು. ನಾಗರಹೊಳೆಯಲ್ಲಿ ಶೇ. 38 ರಷ್ಟು ಮಾತ್ರ ತೇಗದ ಮರಗಳಿವೆ. ಉಳಿದ ಪ್ರದೇಶದಲ್ಲಿ ಹುಲ್ಲು ಬೆಳೆದಿದ್ದರೂ ಆನೆಗಳು ಗ್ರಾಮಗಳಿಗೆ ಬರುತ್ತಿವೆ. ಅರಣ್ಯದಲ್ಲಿ ಆಹಾರ ಕೊರತೆ ಅಷ್ಟು ಕಾಡುತ್ತಿಲ್ಲ ಎಂದರು.

ವನ್ಯಪ್ರಾಣಿಗಳಿಂದ ಸಾವಿಗೀಡಾಗುವ ಜಾನುವಾರುಗಳಿಗೆ ನೀಡುವ ಪರಿಹಾರವನ್ನು ದಯಾತ್ಮಕ ಧನವಾಗಿ ನೀಡಲಾಗುತ್ತಿದೆ. ಜಾನುವಾರುಗಳಿಗೆ ಹೆಚ್ಚಿನ ಪರಿಹಾರ ಬೇಕು ಎಂಬ ಬೇಡಿಕೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಜಾನುವಾರು ಸತ್ತಾಗ ಪಶುವೈದ್ಯರ ಶಿಪಾರಸ್ಸಿನಂತೆ ಹೆಚ್ಚುವರಿ ಪರಿಹಾರ ನೀಡುವ ಚಿಂತನೆ ಇದೆ. ಇದು ಸರ್ಕಾರದ ಮಟ್ಟದಲ್ಲಿ ಅನುಮೋದನೆ ಗೊಳ್ಳಬೇಕಿದೆ ಎಂದರು. ತಿತಿಮತಿ ಎಸಿಎಫ್ ಶ್ರೀಪತಿ ಮಾತನಾಡಿ, ತಿತಿಮತಿ ವ್ಯಾಪ್ತಿಯ ದಿಡ್ಡಳ್ಳಿ, ದೇವಮಚ್ಚಿಯ 100 ಹೆಕ್ಟೆರ್ ಪ್ರದೇಶಗಳಲ್ಲಿ ಕಾಡುಪ್ರಾಣಿಗಳಿಗೆ ಆಹಾರವಾಗುವಂತ ಸಸಿಗಳನ್ನು ನೆಡಲಾಗಿದೆ. ಇದೇ ವ್ಯಾಪ್ತಿಯಲ್ಲಿ 2.5 ಕಿ. ಮೀ. ದೂರಕ್ಕೆ ರೈಲ್ವೆ ಕಂಬಿ ಅಳವಡಿಸಲು ಹಣ ಬಂದಿರುವದ ರಿಂದ ಶೀಘ್ರವಾಗಿ ನಿರ್ಮಾಣ ಗೊಳ್ಳಲಿದೆ. ನಾವು ಕೂಡ ಆನೆಗಳು ಕಾಡಿಗೆ ಬಾರದಂತೆ ಯೋಜನೆ ರೂಪಿಸಲು ಕಾರ್ಯಪ್ರವೃತ್ತವಾಗಿದ್ದೇವೆ ಎಂದರು.

ಮತ್ತಿಗೋಡು ವಲಯ ಅಧಿಕಾರಿ ಕಿರಣ್‍ಕುಮಾರ್ ಮಾತನಾಡಿ, 9 ಕಿ. ಮೀ ದೂರಕ್ಕೆ ರೈಲ್ವೆ ಕಂಬಿ ಅಳವಡಿಸಲು ಹಣ ಬಿಡುಗಡೆಯಾಗಿ ರುವದರಿಂದ ಮಳೆ ಮುಗಿದ ತಕ್ಷಣ ನಿರ್ಮಾಣ ಕಾರ್ಯ ನಡೆಯಲಿದೆ. ನಂತರದ ದಿನಗಳಲ್ಲಿ ಆನೆಗಳು ಒಳನುಸುಳುವ ಸಮಸ್ಯೆ ಪರಿಹಾರ ಕಾಣಲಿದೆ ಎಂದರು. ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಆನೆ, ಮಾನವ ಸಂಘರ್ಷದ ವಿಚಾರದಲ್ಲಿ ಜಿಲ್ಲಾಡಳಿತ 2 ಸಭೆಗಳನ್ನು ನಡೆಸಿದೆ. ಇದರಂತೆ ರೈಲ್ವೆ ಕಂಬಿ ಯೋಜನೆಗೆ ಹಣ ಬಿಡುಗಡೆಯಾಗಿದೆ. ಅಂದಿನ ಸಿಸಿಎಫ್ ಮನೋಜ್‍ಕುಮಾರ್ ಅವರ ಸಲಹೆಯಂತೆ ಯೋಜನೆ ಅನುಷ್ಠಾನವಾಗುತ್ತಿದೆ ಎಂದರು.

ಐಎಫ್‍ಎಸ್ ಅಧಿಕಾರಿಗೆ ತರಾಟೆ

ಕಾಡಾನೆ ಹಾವಳಿಯಿಂದ ತೋಟ ಕಾರ್ಮಿಕರ ಜೀವಕ್ಕೆ ಅಪಾಯವಿದೆ ಎಂಬ ಬೆಳೆಗಾರರ ಆತಂಕಕ್ಕೆ ತಿತಿಮತಿ ಅರಣ್ಯ ವಲಯದಲ್ಲಿ ಪ್ರೊಬೆಷನರಿ ಯಾಗಿ ಕಾರ್ಯನಿರ್ವಹಿಸುತ್ತಿರುವ ಐಎಫ್‍ಎಸ್ ಅಧಿಕಾರಿ ಶಿವಶಂಕರ್ ಅವರ ಸಲಹೆ ಬೆಳೆಗಾರರನ್ನು ಸಿಟ್ಟಿಗೆಬ್ಬಿಸಿತು. ಕಾರ್ಮಿಕರ ಭದ್ರತೆಗೆ ಪ್ರಧಾನಮಂತ್ರಿ ಜೀವವಿಮೆಯನ್ನು ವಾರ್ಷಿಕವಾಗಿ ರೂ. 12 ಕಟ್ಟುವಂತೆ ಶಿವಶಂಕರ್ ಸಲಹೆ ನೀಡಿದರು. ಇದಕ್ಕೆ ಕೋಪ ಪ್ರದರ್ಶಿಸಿದ ಬೆಳೆಗಾರರು ಅವರಿಗೆ ಜೀವವಿಮೆ ಕಟ್ಟಿ ಅವರನ್ನು ಕಳೆದುಕೊಳ್ಳಲು ನಮಗೆ ಆಗುವದಿಲ್ಲ. ಕಾಡಾನೆಗಳನ್ನು ನಾಡಿಗೆ ಬಾರದಂತೆ ನಿಯಂತ್ರಿಸಿ, ಅವರಿಗೆ ಜೀವವಿಮೆ ಕಟ್ಟುವ ಮೂಲಕ ಜೀವವನ್ನು ಕಳೆದುಕೊಳ್ಳುವ ಸಲಹೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರ ನೀಡುವದರಿಂದ ಸಮಸ್ಯೆ ಪರಿಹಾರ ಕಾಣುವದಿಲ್ಲ. ಆನೆಗಳನ್ನು ತೋಟಗಳಿಗೆ ಬಾರದಂತೆ ಅರಣ್ಯ ಇಲಾಖೆ ಕ್ರವಕೈಗೊಳ್ಳಬೇಕು ಎಂದು ಬೆಳೆಗಾರರುಗಳಾದ ಕಾಳಪಂಡ ಸುದೀರ್, ಚಿರಿಯಪಂಡ ರಾಜಾ ನಂಜಪ್ಪ, ಟಾಟು ಮೊಣ್ಣಪ್ಪ, ಮನೋಜ್, ರಂಜನ್ ಚೆಂಗಪ್ಪ ಆಗ್ರಹಿಸಿದರು.

ಸಭೆಯಲ್ಲಿ ಮಾಯಮುಡಿ, ಬಾಳಾಜಿ, ಧನುಗಾಲ, ನಿಟ್ಟೂರು, ಬಾಳೆಲೆ, ದೇವನೂರು ಗ್ರಾಮಸ್ಥರು ಪಾಲ್ಗೊಂಡು ಆನೆಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿದರು. ಈ ಸಂದರ್ಭ ಜಿ. ಪಂ. ಸದಸ್ಯ ಬಾನಂಡ ಪ್ರತ್ಯು, ಪೊನ್ನಂಪೇಟೆ ಅರಣ್ಯ ವಲಯ ಅಧಿಕಾರಿ ಗಂಗಾಧರ್, ತಿತಿಮತಿ ವಲಯ ಅಧಿಕಾರಿ ಅಶೋಕ್, ವೃತ್ತ ನಿರೀಕ್ಷಕ ಹರಿಶ್ಚಂದ್ರ ಉಪಸ್ತಿತರಿದ್ದರು.