ಮಡಿಕೇರಿ, ಜೂ. 12: ಚಿಕ್ಕಮಗಳೂರಿನಿಂದ ಮಂಗಳೂರಿಗೆ ತೆರಳುವ ಹೆದ್ದಾರಿ ಚಾರ್ಮಾಡಿ ಘಾಟ್ ಬಳಿ ಗುಡ್ಡಗಳು ಕುಸಿದಿದ್ದು, ಸಂಚಾರ ಬಂದ್ ಆಗಿದೆ. ಅಲ್ಲಲ್ಲಿ ಗುಡ್ಡಗಳು ಕುಸಿದಿರುವದರಿಂದ 500ಕ್ಕೂ ಹೆಚ್ಚು ವಾಹನಗಳು ತೆರಳ ಲಾರದೆ ಮಧ್ಯದಲ್ಲಿ ಸಿಲುಕಿ ಕೊಂಡಿದ್ದು, ರಸ್ತೆಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವುಮಾಡಿ ಕೊಡಲಾಯಿತು.ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿರುವ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೆ ಅವರು, ಕುಸಿದಿರುವ ಮಣ್ಣನ್ನು ತೆರವು ಗೊಳಿಸುವ ಸಂಬಂಧ 2 ದಿನಗಳ ಕಾಲ ಸಂಚಾರ ಬಂದ್ ಮಾಡುವ ದಾಗಿ ಹೇಳಿದ್ದಾರೆ. ಇದರಿಂದಾಗಿ ಮಂಗಳೂರಿನತ್ತ ತೆರಳುವ ಭಾರೀ ವಾಹನಗಳು ಕೊಡಗು ಮೂಲಕ ಹಾದು ಹೋಗಲಿರುವದಾಗಿ ತಿಳಿದು ಬಂದಿದೆ.ಈಗಾಗಲೇ ಶಿರಾಡಿ ಘಾಟ್ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದ್ದು, ಆ ಮಾರ್ಗದಲ್ಲಿ ತೆರಳುತ್ತಿದ್ದ ಭಾರೀ ವಾಹನಗಳು ಜಿಲ್ಲೆಯ ಮೂಲಕ ಸಂಚರಿಸುತ್ತಿವೆ. ರಾತ್ರಿ 9 ರಿಂದ ಬೆಳಿಗ್ಗೆ 9 ರವರೆಗೆ ಸಂಚರಿಸಲು ಸಮಯ ನಿಗದಿ ಮಾಡಲಾಗಿದೆಯಾದರೂ ಗಡಿಭಾಗದಲ್ಲಿ ತಡೆಯುವವರಿಲ್ಲದೆ ಹಗಲು ವೇಳೆಯಲ್ಲೇ ಸಂಚರಿಸುತ್ತಿದ್ದು, ಆಗಾಗ್ಗೆ ಅವಘಡಗಳು ಸಂಭವಿಸುತ್ತಿ ರುವದನ್ನು ಪ್ರತಿನಿತ್ಯ ಕಾಣಬಹು ದಾಗಿದೆ. ಇನ್ನೂ ಚಾರ್ಮಾಡಿ ಘಾಟ್‍ನಲ್ಲಿ ತೆರಳುವ ವಾಹನಗಳು ಕೂಡ ಸಂಚರಿಸಿದರೆ, ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಮೊದಲೇ ರಸ್ತೆ ಕೂಡ ಹಾಳಾಗುತ್ತಿದ್ದು, ಇನ್ನಷ್ಟು ಹದಗೆಡುವ ಪರಿಸ್ಥಿತಿ ನಿರ್ಮಾಣವಾಗಬಹುದು.