ಪೊನ್ನಂಪೇಟೆ, ಜೂ. 12: ಹಾಡಿವಾಸಿಗಳು ಕುಡಿಯುವ ನೀರು ಮತ್ತು ವಾಸಿಸಲು ಮನೆಯ ಕೊರತೆ ಎದುರಿಸುತ್ತಿರುವ ಕಾನೂರು ಸಮೀಪದ ಮಲ್ಲಂಗೆರೆ ಗಿರಿಜನ ಹಾಡಿಗೆ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ವೀರಾಜಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮತ್ತು ಐ.ಟಿ.ಡಿ.ಪಿ. ಅಧಿಕಾರಿ ಚಂದ್ರಶೇಖರ್ ಮತ್ತು ಕಾನೂರು ಗ್ರಾ.ಪಂ. ಪಿ.ಡಿ.ಓ. ರಾಜೇಶ್ ಅವರೊಂದಿಗೆ ಮಂಗಳವಾರದಂದು ಮಲ್ಲಂಗೆರೆ ಹಾಡಿಗೆ ತೆರಳಿದ ಬಿ.ಎನ್. ಪ್ರಥ್ಯು ಅವರು ಅಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ಕಳೆದ ಹಲವಾರು ವರ್ಷಗಳಿಂದ ಮಲ್ಲಂಗೆರೆ ಗಿರಿಜನ ಹಾಡಿಯ ದುಸ್ಥಿತಿ ದಯನೀಯವಾಗಿದ್ದರೂ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಇಲ್ಲಿನ ಗಿರಿಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಜಿ.ಪಂ. ಸಭೆಗಳಲ್ಲಿ ಈ ಬಗ್ಗೆ ಎಷ್ಟೇ ಪ್ರಸ್ತಾಪಿಸಿದರೂ ಇದುವರೆಗೂ ಯಾವದೇ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಸಮಸ್ಯೆಗಳು ಇಂದಿಗೂ ಸಮಸ್ಯೆಗಳಾಗಿಯೇ ಉಳಿದುಕೊಂಡಿದೆ. ಮಳೆಗಾಲದಲ್ಲಿ ಇಲ್ಲಿನ ಗಿರಿಜನರ ಬದುಕು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೇ ನಾಚಿಕೆಗೇಡು ಎಂದು ಪ್ರಥ್ಯು ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ವೀರಾಜಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರು, ಮಲ್ಲಂಗೆರೆ ಗಿರಿಜನ ಹಾಡಿಯಲ್ಲಿ ಸಮಸ್ಯೆಗಳಿರುವದು ನಿಜ. ಆದರೆ ಇಲ್ಲಿನ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಬಹು ದಾಗಿದೆ. ಮುಂದಿನ ವರ್ಷದೊಳಗಾಗಿ ಮಲ್ಲಂಗೆರೆ ಹಾಡಿಗೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯವನ್ನು ಕಲ್ಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸುವದಾಗಿ ಭರವಸೆ ನೀಡಿದರು. ಇದೀಗ ಕುಡಿಯುವ ನೀರಿನ ಕೊರತೆ ನೀಗಿಸಲು ಹಾಡಿ ಯಲ್ಲಿ ಕೂಡಲೇ ತೆರೆದ ಬಾವಿ ಯೊಂದನ್ನು ನಿರ್ಮಿಸಲಾಗುವದು. ಮತ್ತೆ ಮುಂದಕ್ಕೆ ಇಲ್ಲಿ ಕುಡಿಯುವ ನೀರಿಗಾಗಿ ಕಿರು ನೀರು ಸರಬರಾಜು ಯೋಜನೆಯಡಿ ನೂತನವಾಗಿ ಘಟಕ ಆರಂಭಿಸಲು ಮೊದಲ ಆದ್ಯತೆ ನೀಡಲಾಗುವದು ಅವರು ತಿಳಿಸಿದರು. ಇಲ್ಲಿನ ಹಾಡಿವಾಸಿಗಳ ಪೈಕಿ 15ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ದೊರೆತಿದೆ. ಅದನ್ನು ಕೂಡಲೇ ಪರಿಶೀಲಿಸಿ ಅರ್ಹರಿಗೆ ಸರಕಾರದ ವತಿಯಿಂದ ಮನೆ ನಿರ್ಮಿಸಿ ಹಸ್ತಾಂತರಿಸಲು ಸ್ಥಳದಲ್ಲಿದ್ದ ಕಾನೂರು ಗ್ರಾ.ಪಂ. ಪಿ.ಡಿ.ಓ. ರಾಜೇಶ್ ಅವರಿಗೆ ಜಯಣ್ಣ ಅವರು ಸೂಚಿಸಿದರು.

ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ. ಸರಕಾರವಿ ದ್ದಾಗ ಕುಡಿಯುವ ನೀರಿಗಾಗಿ ಜನಸಂಖ್ಯಾಧಾರದಲ್ಲಿ ಜಿ.ಪಂ.ಗಳಿಗೆ ಕೇಂದ್ರ ಸರಕಾರದ ವಿಶೇಷ ಅನುದಾನ ದೊರೆಯುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಕೇಂದ್ರದಿಂದ ಕುಡಿಯುವ ನೀರಿಗಾಗಿ ಯಾವದೇ ಅನುದಾನ ಬರುತ್ತಿಲ್ಲ. ಇದರಿಂದ ಕುಡಿಯುವ ನೀರಿಗಾಗಿ ಜಿ.ಪಂ. ನಲ್ಲಿ ಅನುದಾನ ಕೊರತೆ ಎದುರಾಗಿದೆ.

ರಾಜ್ಯ ಸರಕಾರ ತನ್ನ ಮಿತಿಯಲ್ಲಿ ಅನುದಾನ ನೀಡುತ್ತಿದ್ದರೂ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಇದು ಸಾಕಾಗುತ್ತಿಲ್ಲ. ಸಂಸದರು ಕೂಡಲೇ ಇತ್ತ ಗಮನ ಹರಿಸಿ ಕುಡಿಯುವ ನೀರಿಗಾಗಿ ಕೇಂದ್ರದ ಅನುದಾನ ಒದಗಿಸಲು ಮಧ್ಯಪ್ರವೇಶಿಸುವಂತೆ ಬಿ.ಎನ್.ಪ್ರಥ್ಯು ಒತ್ತಾಯಿಸಿದರು.