ಸೋಮವಾರಪೇಟೆ,ಜೂ.12: ಕಳೆದ ಐದು ದಿನಗಳಿಂದ ಭಾರೀ ಮಳೆಯಾಗುತ್ತಿದ್ದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಇಂದು ವರುಣನ ಅಬ್ಬರ ಕಡಿಮೆಯಾಗಿದ್ದರೂ, ನದಿ ತೊರೆಗಳಲ್ಲಿ ಪ್ರವಾಹ ಇಳಿಕೆಯಾಗಿಲ್ಲ. ತಾಲೂಕಿನ ಕುಡಿಗಾಣ ಗ್ರಾಮ ಸಂಪರ್ಕಿಸುವ ಸೇತುವೆ ಮುಳುಗಿದ್ದು, ಪುಷ್ಪಗಿರಿ ಬೆಟ್ಟತಪ್ಪಲು ಪ್ರದೇಶದಲ್ಲಿ ಮಳೆಯಾಗುತ್ತಲೇ ಇದೆ.ನಿನ್ನೆ ದಿನಪೂರ್ತಿ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಹಾನಿಗಳು ಸಂಭವಿಸಿದ್ದು, ಮನೆ, ತಡೆಗೋಡೆಗಳು ಕುಸಿದಿದ್ದರೆ, ಕಿರಗಂದೂರು ಗ್ರಾಮದ ಚೋರನ ಹೊಳೆ, (ಮೊದಲ ಪುಟದಿಂದ) ಕುಡಿಗಾಣದ ಹೊಳೆಗಳು ತುಂಬಿ ಹರಿದು ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.ಕಿರಗಂದೂರು ಗ್ರಾಮದ ಚೋರನ ಹೊಳೆ ಉಕ್ಕಿ ಹರಿದ ಪರಿಣಾಮ ಅಲ್ಲಿನ ನಿವಾಸಿಗಳಾದ ರಾಮು, ಮುರುಗ, ಮಣಿ ಅವರುಗಳ ಮನೆಗೆ ನೀರು ನುಗ್ಗಿದೆ. ರಸ್ತೆ ಬದಿ ಹರಿಯುವ ಹೊಳೆಯಲ್ಲಿ ನೀರಿನ ಹರಿವು ಅಧಿಕಗೊಂಡು ರಸ್ತೆ ಜಲಾವೃತವಾದ ಹಿನ್ನೆಲೆ ನಿನ್ನೆ ಸಂಜೆಯಿಂದ ರಾತ್ರಿಯವರೆಗೂ ಜನಜೀವನ ಅಸ್ತವ್ಯಸ್ಥವಾಗಿತ್ತು.

ಇನ್ನು ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿರುವ ಕುಡಿಗಾಣ ಹೊಳೆ ಅಪಾಯಕಾರಿ ಮಟ್ಟದಲ್ಲಿ ಹರಿದಿದ್ದು, ನಿನ್ನೆ ಸಂಜೆ ಸೇತುವೆಯ ಮೇಲೆ ನೀರು ಹರಿಯುತ್ತಿದ್ದ ಹಿನ್ನೆಲೆ ಗ್ರಾಮಸ್ಥರು ಕೈ ಕೈ ಹಿಡಿದುಕೊಂಡು ಪ್ರವಾಹ ದಾಟಿದ್ದಾರೆ. ಸೇತುವೆ ಮುಳುಗಡೆಯಾದ ಹಿನ್ನೆಲೆ ಬಸ್ ಸೇರಿದಂತೆ ಇನ್ನಿತರ ವಾಹನಗಳ ಓಡಾಟಕ್ಕೆ ತಡೆಯಾಗಿದ್ದು, ಇಂದು ಪ್ರವಾಹ ತಗ್ಗಿದೆ ಎಂದು ಭಾಗ್ಯಲಕ್ಷ್ಮೀ ಬಸ್ ಚಾಲಕ ಪ್ರಸಾದ್ ತಿಳಿಸಿದ್ದಾರೆ.

ಭಾರೀ ಮಳೆಗೆ ತಲ್ತರೆಶೆಟ್ಟಳ್ಳಿ ಗ್ರಾಮದ ಬಿ.ಡಿ. ಚಂಗಪ್ಪ ಅವರ ಮನೆಗೆ ನಿರ್ಮಿಸಿದ್ದ ಸುಮಾರು 20 ಅಡಿ ಉದ್ದ, 20 ಅಡಿ ಎತ್ತರದ ಬೃಹತ್ ತಡೆಗೋಡೆ ಕುಸಿದು ಬಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ತಲ್ತರೆಶೆಟ್ಟಳ್ಳಿ ಗ್ರಾಮದ ಬಿ.ಡಿ. ರಮೇಶ್ ಅವರ ಲೈನ್ ಮನೆ ಮೇಲೆ ಮರ ಬಿದ್ದು, ಹಾನಿ ಸಂಭವಿಸಿದೆ. ಸೋಮವಾರಪೇಟೆ-ತಲ್ತರೆಶೆಟ್ಟಳ್ಳಿ ಸಂಪರ್ಕಿಸುವ ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡುವ ರಸ್ತೆಯ ಬದಿ ಕುಸಿತಗೊಂಡಿದ್ದು, ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.

ಗೌಡಳ್ಳಿ ಗ್ರಾಮ ಪಂಚಾಯಿತಿಯ ಹಿರಿಕರ ಗ್ರಾಮದ ಜಿ.ಡಿ.ದಾಮೋಧರ್ ಎಂಬವರಿಗೆ ಸೇರಿದ ವಾಹನ ನಿಲ್ಲಿಸುವ ಶೆಡ್ ಮೇಲೆ ಬೈನೆ ಮರ ಬಿದ್ದ ಪರಿಣಾಮ ಒಂದು ಕಾರು ಹಾಗು ಜೀಪು ಜಖಂಗೊಂಡಿದೆ.

ಬಾಣಾವರ ರಸ್ತೆ ನಿವಾಸಿ ದಿವಾಕರ್ ಎಂಬವರ ನಿವೇಶನದ ಮೇಲ್ಭಾಗದಲ್ಲಿ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿದ್ದು, ನೂತನ ಮನೆ ನಿರ್ಮಾಣಕ್ಕೆ ಹಾಕಿದ್ದ ಅಡಿಪಾಯಕ್ಕೆ ಹಾನಿಯಾಗಿದೆ. ಚೌಡ್ಲು ಗ್ರಾಮದ ವೆಂಕಟೇಶ್ ಅವರ ಮನೆ ಬಳಿ ಬರೆ ಕುಸಿದ ಪರಿಣಾಮ ಶೌಚಾಲಯ ಮತ್ತು ಸ್ನಾನದ ಮನೆಗೆ ಹಾನಿಯಾಗಿ ರೂ. 40 ಸಾವಿರ ನಷ್ಟ ಸಂಭವಿಸಿದೆ. ಇದೇ ಗ್ರಾಮದ ಧರ್ಮಪ್ಪ ಅವರ ಮನೆಯ ತಡೆಗೋಡೆ ಕುಸಿದಿದ್ದು, ರೂ. 30 ಸಾವಿರ ನಷ್ಟವಾಗಿರುವ ಬಗ್ಗೆ ವರದಿಯಾಗಿದೆ.

ಶಾಂತಳ್ಳಿ ಹೋಬಳಿ ಹೊರತು ಪಡಿಸಿದರೆ ಸೋಮವಾರಪೇಟೆ ಕಸಾಬ, ಕೊಡ್ಲಿಪೇಟೆ, ಶನಿವಾರಸಂತೆ, ಸುಂಟಿಕೊಪ್ಪ, ಕುಶಾಲನಗರ ಹೋಬಳಿಗಳಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಪುಷ್ಪಗಿರಿ ಬೆಟ್ಟಶ್ರೇಣಿಯ ಕುಡಿಗಾಣ, ಹೆಗ್ಗಡಮನೆ, ನಾಡ್ನಳ್ಳಿ, ತಡ್ಡಿಕೊಪ್ಪ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದೆ.

ಶಾಲೆಗೆ ತೆರಳಿದ ಮಕ್ಕಳು: ಕಳೆದ ಶನಿವಾರದಿಂದ ಸುರಿಯುತ್ತಿದ್ದ ಭಾರೀ ಮಳೆ ಹಿನ್ನೆಲೆ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದು, ಇಂದು ತರಗತಿಗಳು ಪ್ರಾರಂಭಗೊಂಡ ಹಿನ್ನೆಲೆ ಬೆಳಗ್ಗೆ ಸುರಿಯುತ್ತಿದ್ದ ಮಳೆಯ ನಡುವೆಯೂ ರೈನ್‍ಕೋಟ್, ಕೊಡೆಗಳನ್ನು ಹಿಡಿದು ಮಕ್ಕಳು ಶಾಲೆಗೆ ತೆರಳಿದರು.

ಕಳೆದ 24 ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆಗೆ 138.2, ಕೊಡ್ಲಿಪೇಟೆಗೆ 56.6, ಶನಿವಾರಸಂತೆಗೆ 100, ಕುಶಾಲನಗರಕ್ಕೆ 6.2, ಸುಂಟಿಕೊಪ್ಪಕ್ಕೆ 15.02, ಶಾಂತಳ್ಳಿಗೆ 171 ಮಿ.ಮೀ. ಮಳೆ ದಾಖಲಾಗಿದೆ.

ಮಕ್ಕಂದೂರು : ಕಳೆದೆರದು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಮಕ್ಕಂದೂರುವಿನಿಂದ ತಂತಿಪಾಲ - ಮುಕ್ಕೋಡ್ಲುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿನ್ನೆ ಕುಸಿದಿದೆ. ಬಾರೀ ಗಾತ್ರದ ಮರ ಕೂಡ ಉರುಳಿ ಬಿದ್ದಿದ್ದು ಅರ್ಧ ಭಾಗದಷ್ಟು ರಸ್ತೆ ಕುಸಿದು ಹೋಗಿದೆ. ಮರ ಅಡ್ಡಲಾಗಿ ಬಿದ್ದುದರಿಂದ ಸಂಚಾರಕ್ಕೆ ಅಡಚಣೆಯಾದ ಹಿನ್ನೆಲೆಯಲ್ಲಿ ಸ್ಥಳೀಯರೇ ಸೇರಿ ಕೊಂಡು ಮರ ಕಡಿದು, ರಸ್ತೆಯಲ್ಲಿದ್ದ ಮಣ್ಣನ್ನು ತೆರವುಗೊಳಿಸಿದರು. ಈ ಹಿಂದೆ ಕೂಡ ಇದೇ ಸ್ಥಳದಲ್ಲಿ ರಸ್ತೆ ಕುಸಿದು ಸಂಚಾರಕ್ಕೆ ಅಡಚಣೆಯಾಗಿತ್ತು.

ಕೂಡಿಗೆ: ಮಳೆಯಿಂದ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಕುಶಾಲನಗರ ಹೋಬಳಿ ವ್ಯಾಪ್ತಿ ಭತ್ತದ ಬೆಳೆಗೆ ಹಾನಿಯಾಗಿ ನಷ್ಟವಾಗಿದೆ.

ಕೂಡಿಗೆ-ಕಣಿವೆ ಮಧ್ಯೆ ಕಾವೇರಿ ನದಿಗೆ ನೀರು ಹರಿಯಲು ಸಣ್ಣ ತೋಡನ್ನು ನಿರ್ಮಿಸಿದ್ದು, ಆ ಜಾಗದಲ್ಲಿ ನೀರು ಹೆಚ್ಚಾಗಿದೆ. ಗಿರೀಶ್, ದಿವಾಕರ್, ಪ್ರಭ, ಕೃಷ್ಣೇಗೌಡ ಅವರಿಗೆ ಸೇರಿದ ಜಮೀನುಗಳಿಗೆ ನುಗ್ಗಿರುವ ನೀರಿನಿಂದ ಭತ್ತ ಹಾನಿಗೊಳಗಾಗಿದೆ.

ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯವರು ಸ್ಥಳ ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಸಂತ್ರಸ್ತ ರೈತರು ಒತ್ತಾಯಿಸಿದ್ದಾರೆ.

ಸುಂಟಿಕೊಪ್ಪ: ಮಳೆ ಗಾಳಿಯ ಅಬ್ಬರಕ್ಕೆ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದ ಮೇಲ್ಚಾವಣಿ ಗಾಳಿ ಹಾರಿ ನೆಲಕ್ಕೆ ಬಿದ್ದಿದೆ.

ಕಳೆದ 5 ದಿನಗಳಿಂದ ಎಡೆಬಿಡದೆ ಸುರಿದ ಭಾರೀ ಗಾಳಿ ಮಳೆಗೆ ಶಾಲೆಗಳಿಗೆ ರಜೆ ನೀಡಲಾಗಿದ್ದು ರಜೆ ಕಳೆದು ಇಂದು ಬೆಳಿಗ್ಗೆ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಶಾಲೆಗೆ ಬಂದಾಗ ಸಭಾಂಗಣದ ಮೇಲ್ಚಾವಣಿ ಬಿದ್ದಿರುವದು ಗೋಚರಿಸಿದೆ.

ಹಳೆಯ ಕಾಲದ ಈ ಸಭಾಂಗಣವನ್ನು ದುರಸ್ತಿಪಡಿಸ ಬೇಕೆಂದು ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಶಾಲೆಯ ಎಸ್‍ಡಿಎಂಸಿ ಯವರು ಅಹವಾಲು ನೀಡಿದರೂ ಪ್ರಯೋಜನವಾಗದೇ ಮಳೆಗೆ ಸಭಾಂಗಣ ಆಹುತಿಯಾಗಿದೆ.

ಮಳೆಯಿಂದ ಸುಂಟಿಕೊಪ್ಪ ಅಸುಪಾಸಿನಲ್ಲಿ ಮರಗಳು, ವಿದ್ಯುತ್ ಕಂಬಗಳು ವಿದ್ಯುತ್ ವಯರ್‍ಗಳು ಅಲ್ಲಲ್ಲಿ ಬಿದ್ದಿರುವದು ಕಂಡು ಬಂದಿದೆ.