ಚೆಟ್ಟಳ್ಳಿ, ಜೂ. 12: ರೈತರು ಹಾಗೂ ಕೃಷಿಕರು ಉತ್ತಮ ಫಸಲನ್ನು ಪಡೆಯುವಲ್ಲಿ ಗೊಬ್ಬರದ ಬಳಕೆಯ ವಿಧಾನವನ್ನು ಕಾರ್ಯಾಗಾರಗಳ ಮೂಲಕ ತಿಳಿಯಬೇಕೆಂದು ಚೆಟ್ಟಳ್ಳಿ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಡೆದ ಪೋಷಾಕ್ ಕಂಪೆನಿ ಆಯೋಜಿಸಿದ ರೈತರಿಗೆ ಗೊಬ್ಬರ ಬಳಕೆ ಕಾರ್ಯಾಗಾರದಲ್ಲಿ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು.

ಚೆಟ್ಟಳ್ಳಿಯಲ್ಲಿ ಹೆಚ್ಚಿನ ರೈತರು ಹೈನುಗಾರಿಕೆಯ ಮೂಲಕ ಸಾವಯವ ಗೊಬ್ಬರವನ್ನು ಮಾಡಿ ಬೆಳೆಯುವ ಮೂಲಕ ಮಾದರಿ ರೈತಾವಳಿಯಾಗಿದ್ದಾರೆ ಎಂದರು.

ಹಿಂದಿನ ಕಾಲದಲ್ಲಿ ಸಗಣಿ ಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಿದ್ದು ಆರೋಗ್ಯವಂತ ಗಿಡ ಬೆಳೆಯಲು ಸಾಧ್ಯವಾಯಿತು.

ಆದರೆ ಈಗ ಅಸಮರ್ಪಕ ಗೊಬ್ಬರ ಬಳಕೆಯಿಂದ ಫಸಲಿನ ಗುಣಮಟ್ಟ ಹಾಗೂ ಗಿಡಗಳಿಗೆ ವಿವಿಧ ಖಾಯಿಲೆಗಳು ಬರುವ ಪರಿಸ್ಥಿತಿಯಾಗಿದೆ ಎಂದು ಧಾರವಾಡ ಕೃಷಿ ವಿಜ್ಞಾನ ಸಂಸ್ಥೆಯ ಪೋಷಾಕ್ ಗೊಬ್ಬರದ ಕೊಡಗು ಜಿಲ್ಲಾ ವಿತರಕ ವಿಷ್ಣುಮೂರ್ತಿ ತಿಳಿಸಿದರು.

ಹಲವು ಗೊಬ್ಬರ ಕಂಪೆನಿಗಳು ಕಳಪೆ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದು, ಎಚ್ಚರವಹಿಸಬೇಕು. ಪ್ರತಿಯೊಬ್ಬ ರೈತನು ಗೊಬ್ಬರದ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರಬೇಕೆಂದು ಸ್ಥಳೀಯ ಕಾಫಿ ಬೆಳೆಗಾರ ಬಲ್ಲಾರಂಡ ದೇವಯ್ಯ ಹಾಗೂ ಪೇರಿಯನ ಜಯಾನಂದ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿ ಶಾಲಾ ಮಕ್ಕಳಿಗೆ ಕರಿಮೆಣಸು ಬಳ್ಳಿ, ಅಡಕೆ ಗಿಡಗಳನ್ನು ನೀಡಿ ಶಾಲೆಗಳಲ್ಲಿ ನೆಟ್ಟು ಬೆಳೆಸುವಂತೆ ಬಲ್ಲಾರಂಡ ಮಣಿ ಉತ್ತಪ್ಪ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘದ ನಿರ್ದೇಶಕರು, ರೈತ ಸದಸ್ಯರು ಭಾಗವಹಿಸಿ ಗೊಬ್ಬರ ನಿರ್ವಹಣೆಯ ಬಗ್ಗೆ ತಿಳಿಸಿದರು.