ಮಡಿಕೇರಿ, ಜೂ. 12: ವೀರಾಜಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕೊಂಕಣ ರೈಲ್ವೆ ಸಂಸ್ಥೆಗೆ ಸೇರಿದ ಸಿಬ್ಬಂದಿಗಳ ತಂಡ ಖಾಸಗಿ ಜಮೀನಿಗೆ ಪ್ರವೇಶಿಸಿ ರೈಲುಮಾರ್ಗದ ನೆಪದಲ್ಲಿ ಸಮೀಕ್ಷೆ ನಡೆಸಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ಈ ತಂಡ ಅನುಮತಿಯಿಲ್ಲದೆ ಸಮೀಕ್ಷೆ ಕೈಗೊಂಡಿದ್ದಲ್ಲಿ ತಂಡದ ಮುಖ್ಯಸ್ಥರಾದ ಆದರ್ಶ್‍ಕುಶಾಲ್ ಅಗರ್‍ವಾಲ್ ಮತ್ತವರ ತಂಡದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೊಡಗು ಏಕೀಕರಣ ರಂಗ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಏಕೀಕರಣರಂಗದ ಕಾರ್ಯದರ್ಶಿ ಟಿ.ಎಂ. ಸೋಮಯ್ಯ ಅವರು ಮೈಸೂರು - ತಲಚೇರಿ ರೈಲ್ವೆ ಮಾರ್ಗದ ಪ್ರಸ್ತುತದ ಸ್ಥಿತಿಗತಿಗಳ ಬಗೆಗಿನ ವಾಸ್ತವಾಂಶವನ್ನು ಜಿಲ್ಲೆಯ ಸಾರ್ವಜನಿಕರಿಗೆ ಬಹಿರಂಗಪಡಿಸು ವಂತೆ ರಂಗದ ಪರವಾಗಿ ಆಗ್ರಹಿಸಿದ್ದಾರೆ.

ಕೊಡಗು ಜಿಲ್ಲೆಯ ಮೂಲಕ ಕೇರಳದ ತಲಚೇರಿಯಿಂದ ಮೈಸೂರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಪ್ರಸ್ತಾಪದ ವಿಚಾರದಲ್ಲಿ ಕೊಡಗು ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಸಮಯದಲ್ಲಿ ಕೇಂದ್ರದ ರೈಲ್ವೆ ಖಾತೆ ಸಚಿವರನ್ನು ಕೊಡಗು ಏಕೀಕರಣ ರಂಗದ ಸಮಿತಿ ಭೇಟಿಯಾಗಿತ್ತು. ಆ ಸಮಯದಲ್ಲಿ ಕೇಂದ್ರದ ರೈಲ್ವೆ ಖಾತೆ ಸಚಿವರು ಮೈಸೂರು - ತಲಚೇರಿ ರೈಲ್ವೆ ಮಾರ್ಗಕ್ಕೆ ಅನುಮತಿ ನೀಡು ವದಿಲ್ಲ ಎಂದು ಸ್ಪಷ್ಟ ಭರವಸೆಯನ್ನು ನೀಡಿದ್ದರು. ಕೇಂದ್ರದ ರೈಲ್ವೆ ಖಾತೆ ಸಚಿವರು ಈ ವಿಚಾರವನ್ನು ಮಾಧ್ಯಮಗಳ ಮೂಲಕವೂ ಬಹಿರಂಗಪಡಿಸಿದ್ದರು.

ತಾ.7.2.2018 ರಂದು ವಿಧಾನಸಭೆಯಲ್ಲಿ ರಾಜ್ಯದ ಬೃಹತ್, ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಆರ್.ವಿ. ದೇಶಪಾಂಡೆ ಕೂಡ ಖಚಿತ ಭರವಸೆ ನೀಡಿ ಈ ಯೋಜನೆಗೆ ರಾಜ್ಯ ಸರಕಾರ ಅನುಮತಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ತಾ. 4.6.2018 ರಂದು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕುಟ್ಟ, ಕೆ. ಬಾಡಗ, ಕುಮಟೂರು ಗ್ರಾಮಗಳಲ್ಲಿ ಕೊಂಕಣ ರೈಲ್ವೆಗೆ ಸೇರಿದ ಸಿಬ್ಬಂದಿಗಳ ತಂಡವೊಂದು ಖಾಸಗಿ ಜಮೀನಿಗೆ ಪ್ರವೇಶಿಸಿ ಮೈಸೂರು - ತಲಚೇರಿ ರೈಲ್ವೆ ಮಾರ್ಗದ ನೆಪದಲ್ಲಿ ಸಮೀಕ್ಷೆ ನಡೆಸಿದ್ದಾರೆ. ಈ ತಂಡದ ಮುಖ್ಯಸ್ಥ ಆದರ್ಶ ಕುಶಾಲ್ ಅಗರವಾಲ್ ಎಂಬವರು ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್‍ನ ಗುರುತಿನ ಚೀಟಿಯನ್ನು ತೋರಿಸಿ ದ್ದಾರೆ. ಆದರೆ ಈ ತಂಡದೊಂದಿಗೆ ಕಂದಾಯ ಇಲಾಖೆಯ ಯಾವೊಬ್ಬ ಸಿಬ್ಬಂದಿಯೂ ಹಾಜರಿರಲಿಲ್ಲ. ಈ ಬೆಳವಣಿಗೆ ಅತ್ಯಂತ ಗಂಭೀರವಾಗಿದ್ದು, ಕೊಡಗು ಜಿಲ್ಲೆಯ ನಿವಾಸಿಗಳನ್ನು ಆಕ್ರೋಶಕ್ಕೀಡುಮಾಡಿದೆ ಎಂದು ರಂಗ ಆಕ್ಷೇಪ ವ್ಯಕ್ತಪಡಿಸಿದೆ.