ಮಡಿಕೇರಿ, ಜೂ. 12: ಕೊಡಗು ಜಿಲ್ಲೆಯಾದ್ಯಂತ ಮುಂದುವರಿದಿರುವ ವಾಯು - ವರುಣರ ರೌದ್ರನರ್ತನ ದಿಂದಾಗಿ ಎಲ್ಲೆಡೆ ವಿದ್ಯುತ್ ಸಮಸ್ಯೆ ತಲೆದೋರುವದರೊಂದಿಗೆ ಚೆಸ್ಕಾಂ ಇಲಾಖೆಗೆ ರೂ. 52.17 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಇಲಾಖೆಯ ಮೂಲಗಳು ಖಚಿತಪಡಿಸಿವೆ. ಜಿಲ್ಲೆಯ ದಕ್ಷಿಣ ಗಡಿ ಕುಟ್ಟದಿಂದ ಉತ್ತರ ಭಾಗದ ಕೊಡ್ಲಿಪೇಟೆ ತನಕ ಸಮಸ್ಯೆಯಾಗಿದ್ದು, ನೂರಾರು ಚೆಸ್ಕಾಂ ಸಿಬ್ಬಂದಿ ಆ ಭಾಗದ ಜನತೆಯ ಸಹಕಾರದೊಂದಿಗೆ ಸಮರೋಪಾದಿಯಲ್ಲಿ ದುರಸ್ತಿ ಕೆಲಸದಲ್ಲಿ ತೊಡಗಿರುವದಾಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಕುಶಾಲನಗರ ಹಾಗೂ ಮಡಿಕೇರಿ ನಡುವೆ ಮುಖ್ಯಮಾರ್ಗದಲ್ಲಿ ಯಾವದೇ ತೊಂದರೆ ಇಲ್ಲವೆಂದೂ, ಅಲ್ಲಲ್ಲಿ ವಿದ್ಯುತ್ ಉಪಮಾರ್ಗಗಳಲ್ಲಿ ಸಮಸ್ಯೆ ಎದುರಾಗಿದ್ದು, ನಿರಂತರ ಮಳೆಯೊಂದಿಗೆ ಗಾಳಿಯ ತೀವ್ರತೆ ನಡುವೆ ದುರಸ್ಥಿ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ‘ಶಕ್ತಿ’ಯೊಂದಿಗೆ ವಿವರಿಸಿದ್ದಾರೆ. ಅಲ್ಲಲ್ಲಿ ಕಂಬಗಳು ಮುರಿದು ಬೀಳುವದು, ವಿದ್ಯುತ್ ತಂತಿಗಳ ಮೇಲೆ ಗಾಳಿಗೆ ಮರದ ಕೊಂಬೆಗಳು ಬಿದ್ದು ಅಡಚಣೆ, ಟ್ರಾನ್ಸ್‍ಫಾರ್ಮರ್ ಹಾನಿಗೊಂಡಿರುವದು ಸೇರಿದಂತೆ ಹಲವು ಸಮಸ್ಯೆಗಳಿಂದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ನಾಲ್ಕೈದು ದಿನಗಳಿಂದ ಕತ್ತಲೆ ಉಂಟಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಷ್ಟ ಅಂದಾಜು : ಪ್ರಸಕ್ತ ರೂ. 52.17 ಲಕ್ಷದಷ್ಟು ನಷ್ಟದ ಅಂದಾಜು ಮಾಡಲಾಗಿದ್ದು, ಹಿಂದಿನ 48 ಗಂಟೆಗಳ ಹಾನಿಯ ವಿವರ ಇನ್ನಷ್ಟೇ ಲಭಿಸಬೇಕಿದೆ ಎಂದು ಮೂಲಗಳು ತಿಳಿಸಿವೆ. ವಿದ್ಯುತ್ ಕಂಬಗಳು ತುಂಡಾಗಿರುವ ಪರಿಣಾಮ ರೂ. 36.39 ಲಕ್ಷ ಹಾನಿಯಾಗಿದೆ. ಟ್ರಾನ್ಸ್‍ಫಾರ್ಮರ್‍ಗಳ ಹಾನಿಯಿಂದ ರೂ. 14.68 ಲಕ್ಷ ಹಾಗೂ ವಯರ್‍ಗಳು ಇತ್ಯಾದಿ ರೂ. 1.10 ಲಕ್ಷ ನಷ್ಟ ಉಂಟಾಗಿರುವ ಮಾಹಿತಿಯಷ್ಟೇ ಈಗ ಲಭ್ಯವೆಂದು ಖಾತರಿಪಡಿಸಿದ್ದಾರೆ.

ನಿರಂತರ ದುರಸ್ತಿಕಾರ್ಯ : ಮೇಲಿಂದ ಮೇಲೆ ವಿದ್ಯುತ್ ಸಂಪರ್ಕ ಕಡಿತಗೊಂಡು ಸಮಸ್ಯೆಗಳು ಎದುರಾಗಿದ್ದು, ಮಡಿಕೇರಿ ವಿಭಾಗದಲ್ಲಿ 104 ಮಂದಿ ಲೈನ್‍ಮೆನ್‍ಗಳ ಸಹಿತ ಅಧಿಕಾರಿಗಳು ನಿರಂತರ ಕೆಲಸದಲ್ಲಿ ತೊಡಗಿದ್ದಾರೆ. ವೀರಾಜಪೇಟೆ ವ್ಯಾಪ್ತಿಯಲ್ಲಿ 51 ಮಂದಿ, ಗೋಣಿಕೊಪ್ಪ ಸುತ್ತಮುತ್ತ 65 ಮಂದಿ ಲೈನ್‍ಮೆನ್‍ಗಳ ಸಹಿತ ಆಯಾ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕೆಲಸ ಕೈಗೊಂಡಿದ್ದಾರೆ.

ಇನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ 71 ಮಂದಿ ಹಾಗೂ ಕುಶಾಲನಗರ

(ಮೊದಲ ಪುಟದಿಂದ) ಸುತ್ತಮುತ್ತ 77 ಮಂದಿ ನೌಕರರ ಸಹಿತ ಇಲಾಖೆ ಅಧಿಕಾರಿಗಳು ದುರಸ್ತಿ ಕೆಲಸದಲ್ಲಿ ತೊಡಗಿದ್ದು, ಸಾರ್ವ ಜನಿಕರು ಇಲಾಖೆ ಸಿಬ್ಬಂದಿ ಯೊಂದಿಗೆ ಸಹಕಾರ ನೀಡಬೇಕೆಂದು ಚೆಸ್ಕಾಂ ಅಧಿಕಾರಿಗಳಾದ ಪಿ.ಎನ್. ದೇವಯ್ಯ ಹಾಗೂ ರಮಾಕಾಂತ್ ಮನವಿ ಮಾಡಿಕೊಂಡಿದ್ದಾರೆ.

ತೊಡಕುಗಳೇ ಹೆಚ್ಚು : ಗಾಳಿ- ಮಳೆಯಿಂದ ವಿದ್ಯುತ್ ಸಮಸ್ಯೆ ಎದುರಾಗುವ ಸಂದರ್ಭ ನಿರ್ದಿಷ್ಟ ಸ್ಥಳ ಗುರುತಿಸಿ, ಹಾನಿ ತಪ್ಪಿಸುವಷ್ಟರಲ್ಲಿ ಬೇರೆಡೆ ಅಡಚಣೆ ಎದುರಾಗಲಿದ್ದು, ಕೊಡಗಿನ ಶೇ. 80ರಷ್ಟು ವಿದ್ಯುತ್ ಸಂಪರ್ಕ ತಂತಿಗಳು ಕಾಫಿ ತೋಟ, ಕಾಡುಗಳ ನಡುವೆ ಹಾದು ಹೋಗಿರುವದು ಈ ತೊಂದರೆಗೆ ಮೂಲ ಕಾರಣವೆಂದು ಅಭಿಪ್ರಾಯ ಪಟ್ಟಿದ್ದಾರೆ.

ಸಾಮಾಗ್ರಿ ಒಯ್ಯಲು ಅಡ್ಡಿ: ಇಂತಹ ಕಡೆಗಳಲ್ಲಿ ಹಾನಿಗೊಂಡಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲು ವಾಹನಗಳು ತೆರಳಲು ಮಾರ್ಗವಿಲ್ಲದೆ, ಮನುಷ್ಯ (ನೌಕರರು) ಸಾಮಥ್ರ್ಯದಿಂದ ಸಾಗಾಟ ಇತ್ಯಾದಿ ಕಷ್ಟಸಾಧ್ಯವಾಗಿ ಕೆಲಸ ವಿಳಂಬವಾಗುತ್ತಿದೆ, ಅನೇಕ ಕಡೆಗಳಲ್ಲಿ ಗದ್ದೆ ಬಯಲು, ಹೊಳೆ, ತೊರೆಗಳನ್ನು ದಾಟಿ ವಿದ್ಯುತ್ ತಂತಿಗಳು ಹಾದುಹೋಗಿವೆ. ಗಾಳಿ ಮಳೆಯಿಂದ ಹಾನಿಗೊಂಡಿರುವ ಕಡೆ ಅಂತಹ ಸಮಸ್ಯೆ ಬಗೆಹರಿಸಲು ಸಾಕಷ್ಟು ಅಡಚಣೆಗಳಿವೆ.

ಕಂಬಗಳನ್ನು ಹೂಳಲು ಗುಂಡಿ ತೆಗೆಯುವಷ್ಟರಲ್ಲಿ ನೀರು ತುಂಬಿಕೊಂಡರೆ, ಭಾಗಮಂಡಲ ದಂತಹ ಕಡೆಗಳಲ್ಲಿ ತುಂಬಿ ಹರಿಯುವ ಹೊಳೆಗಳನ್ನು ದಾಟಿ ಮತ್ತೊಂದೆಡೆ ನೌಕರರು ತೆರಳಲು ಸಕಾಲದಲ್ಲಿ ಸಾಧ್ಯವಾಗುತ್ತಿಲ್ಲ. ಇಂತಹ ಅನೇಕ ಸಮಸ್ಯೆಗಳ ನಡುವೆಯೂ ಪ್ರಾಣದ ಹಂಗು ತೊರೆದು ಲೈನ್‍ಮೆನ್‍ಗಳು ಸ್ಥಳೀಯರೊಡಗೂಡಿ ಕಾರ್ಯನಿರ್ವಹಿಸುವಂತಾಗಿದೆ.

ಮಳೆ ಬಿಡುವು ಸಿಕ್ಕಿ ನೀರು ಹರಿಯುವಿಕೆ ಇಳಿಮುಖಗೊಂಡರೆ ಅಂತಹ ಪ್ರದೇಶದಗಳಲ್ಲಿ ಆದಷ್ಟು ಬೇಗ ಬೇಗ ದುರಸ್ಥಿ ಕೆಲಸ ನಡೆಯುತ್ತಿದ್ದು, ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಎದುರಿಸಲು ಯಾವದೇ ಉಪಕರಣ ಗಳ ಕೊರತೆ ಇಲ್ಲವೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಕಷ್ಟು ಕಂಬಗಳು, ಟ್ರಾನ್ಸ್‍ಫಾರ್ಮರ್ ಗಳು ತಂತಿ ಇತ್ಯಾದಿ ದಾಸ್ತಾನು ಇದ್ದು, ಜನತೆಯ ಕರೆಗಳನ್ನು ಸ್ವೀಕರಿಸಿ ಸಕಾಲದಲ್ಲಿ ಸಾಧ್ಯವಿರುವ ಮಟ್ಟಿಗೆ ಬೆಳಕು ನೀಡಲು ಶ್ರಮಿಸಲಾಗುತ್ತಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.