ಕುಶಾಲನಗರ, ಜೂ. 12: ಕೂಡಿಗೆ ಸೈನಿಕ ಶಾಲೆ ದೆಹಲಿಯಲ್ಲಿರುವ ಸೈನಿಕ ಶಾಲೆ ಸೊಸೈಟಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಶಾಲೆಗೆ ಅವಶ್ಯಕತೆಯಿರುವ ಸಿಬ್ಬಂದಿಗಳ ನೇಮಕಾತಿಗೆ ಸೈನಿಕ ಶಾಲೆಯ ಸೊಸೈಟಿ ಅನುಮತಿ ದೊರೆಯಬೇಕಿದೆ ಎಂದು ಶಾಲಾ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಸ್ಪಷ್ಟಪಡಿಸಿದ್ದಾರೆ.

ಶಾಲೆಯ ಗುತ್ತಿಗೆ ನೌಕರರ ನೇಮಕಾತಿ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಕ್ಕೆ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಗುತ್ತಿಗೆ ಆಧಾರಿತ ನೇಮಕಾತಿ ನಿಗದಿತ ಅವಧಿಗೆ ಸೀಮಿತವಾಗಿದ್ದು ತಾತ್ಕಾಲಿಕವಾಗಿರುತ್ತದೆ. 2017-18ನೇ ಸಾಲಿನಲ್ಲಿ 14 ಗುತ್ತಿಗೆ ಅಧಾರಿತ ಸಾಮಾನ್ಯ ನೌಕರರ ನೇಮಕಕ್ಕೆ ಸೈನಿಕ ಶಾಲಾ ಸೊಸೈಟಿಯಿಂದ ಅನುಮತಿ ದೊರಕಿತ್ತು. ಪ್ರಸ್ತುತ ಸಾಲಿನಲ್ಲಿ ಗುತ್ತಿಗೆ ಆಧಾರಿತ ನೌಕರರ ನೇಮಕಾತಿಗಾಗಿ ಸೈನಿಕ ಶಾಲಾ ಸೊಸೈಟಿಯಿಂದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.