ಸುಂಟಿಕೊಪ್ಪ, ಜೂ. 13: ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಹೆಚ್ಚಾಗಿದ್ದು ಗಾಳಿ-ಮಳೆಯ ಆರ್ಭಟಕ್ಕೆ ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಕಾಮಗಾರಿಗಾಗಿ ಸಮತಟ್ಟುಗೊಳಿಸಲಾಗಿದ್ದ ಸ್ಥಳದ ಉಳಿಕೆ ಭಾಗವು ಕುಸಿದು ಬಿದ್ದಿದೆ.

ಸರಕಾರಿ ಪದವಿಪೂರ್ವ ಕಾಲೇಜಿನ ತರಗತಿಗಳು ಆರಂಭಗೊಂಡಿದ್ದು, ಕಟ್ಟಡ ಯಾವ ಕ್ಷಣದಲ್ಲೂ ಧರೆಗುರುಳುವ ಸ್ಥಿತಿಯಲ್ಲಿದ್ದು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಲ್ಲಿ ಭೀತಿ ಕಾಡಲಾರಂಭಿಸಿದೆ.

ಸರಕಾರಿ ಪದವಿಪೂರ್ವ ಕಾಲೇಜಿಗೆ ಹೆಚ್ಚುವರಿ ನೂತನ ಕೊಠಡಿಗಳ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಪಾಠ ನಡೆಯುತ್ತಿರುವ ಕಾಲೇಜು ಕಟ್ಟಡಕ್ಕೆ ಅಪಾಯ ತಲೆದೋರುವಂತಾಗಿದೆ.

ಈ ಕಾಲೇಜಿನ ಪಕ್ಕದಲ್ಲಿರುವ ಅಂಗನವಾಡಿಗೆ ತೆರಳುವ ಹಾದಿಯು ಮಳೆಯ ಆರ್ಭಟಕ್ಕೆ ಕುಸಿದಿದ್ದು, ಅಂಗನವಾಡಿ ಕಟ್ಟಡವು ಮಳೆ-ಗಾಳಿಗೆ ಸಿಲುಕುವ ಲಕ್ಷಣ ಕಂಡುಬರುತ್ತಿದೆ. ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜು ನೂತನ ಕಟ್ಟಡ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ನಬಾರ್ಡ್‍ನ ಆರ್.ಐ.ಡಿ.ಎಫ್. ಯೋಜನೆಯಡಿ ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡು 3 ವರ್ಷಗಳ ಹಿಂದೆ ಕಾಲೇಜು ಪ್ರಾರಂಭಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಸೇರಿದಂತೆ ಕಾಲೇಜಿನಲ್ಲಿ 64 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಕಳೆದ ವರ್ಷ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಉತ್ತಮ ಫÀಲಿತಾಂಶ ಲಭ್ಯವಾಗಿದೆ. ಇದೀಗ ಹೆಚ್ಚುವರಿ ಕೊಠಡಿ ಅಗತ್ಯತೆಗಾಗಿ ಜಾಗ ಸಮತಟ್ಟು ಮಾಡಲು ಕೊರೆಯಲಾಗಿದ್ದು, ಪಾಠ ನಡೆಯುತ್ತಿರುವ ಕಾಲೇಜು ಕುಸಿಯುವ ಹಂತಕ್ಕೆ ತಲಪಿದೆ. ವಿದ್ಯಾರ್ಥಿಗಳು, ಬೋಧಕರು ಜೀವ ಭಯದಿಂದ ಪಾಠ ಪ್ರವಚನ ನಡೆಸುವಂತಾಗಿದೆ. ಕಾಲೇಜಿನ ಆವರಣದಲ್ಲಿಯೇ ಅಂಗನವಾಡಿ ಕೇಂದ್ರ ಕಾರ್ಯಾಚರಿಸುತ್ತಿದ್ದು, ಇದರ ಕೆಳಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹೈಟೆಕ್ ಶೌಚಾಲಯ ನಿರ್ಮಿಸಲು ಜಾಗ ಸಮತಟ್ಟು ಮಾಡುವ ಭರದಲ್ಲಿ ಅಂಗನವಾಡಿಯ ಸಮೀಪದ ಬರೆಯನ್ನು ಕೊರೆಯಾಲಾಗಿದ್ದು, ಅಂಗನವಾಡಿಯ ದಾರಿ ಕುಸಿದಿದೆ. ಪುಟಾಣಿ ಮಕ್ಕಳು ಶಿಕ್ಷಕಿಯರು ಜೀವ ಭಯದಿಂದ ನಡೆದಾಡುವಂತಾಗಿದೆ.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅನುದಾನದಲ್ಲಿ ರೂ. 10 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರ್ರಮಣಿ ರೂ. 2 ಲಕ್ಷ ಕಾಲೇಜಿಗೆ ಬಿಡುಗಡೆ ಮಾಡಲು ಈ ಹಿಂದೆ ಭರವಸೆ ನೀಡಿದ್ದು, ಕ್ರಿಯಾ ಯೋಜನೆ ತಯಾರಿಸಿ ಅಂಗನವಾಡಿ ತಡೆಗೋಡೆ ಪ್ರಗತಿಯಲ್ಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ವೈ.ಯಂ. ಕರುಂಬಯ್ಯ ತಿಳಿಸಿದ್ದಾರೆ.

ಜನಪ್ರತಿನಿಧಿಗಳು, ಜಿಲ್ಲಾಡಳಿತ ಪಕೃತಿ ವಿಕೋಪ ಯೋಜನೆಯಡಿ ಅಪಾಯಕ್ಕೆ ಕಾದು ನಿಂತಿರುವ ಕಾಲೇಜು ಕಟ್ಟಡದ ತಡೆಗೋಡೆಗೆ ಕೂಡಲೇ ಹಣ ಬಿಡುಗಡೆ ಗೊಳಿಸಿ ತ್ವರಿತಗತಿಯಲ್ಲಿ ಕಾಮಗಾರಿ ನಡೆಸಬೇಕೆಂದು ಕಾಲೇಜಿನ ವಿದ್ಯಾರ್ಥಿಗಳು, ಪ್ರಬಾರ ಪ್ರಾಂಶುಪಾಲ ಸೋಮಚಂದ್ರ ಹಾಗೂ ಆಡಳಿತ ಮಂಡಳಿ ಉಪಾಧ್ಯಕ್ಷ ವೈ.ಯಂ. ಕರುಂಬಯ್ಯ ಆಗ್ರಹಿಸಿದ್ದಾರೆ.