ವೀರಾಜಪೇಟೆ, ಜೂ. 13: ರಸ್ತೆಯ ಅಂಚಿನಲ್ಲಿರುವ ಕೆರೆಗೆ ಯಾವದೇ ರೀತಿಯ ತಡೆಗೋಡೆಯಿಲ್ಲದೆ ಮಳೆಗಾಲದಲ್ಲಿ ರಸ್ತೆ ಯಾವದು-ಕೆರೆ ಯಾವದು ಎಂದು ತಿಳಿಯದೆ ಅಪಘಾತಗಳಿಗೆ ಕೈಬೀಸಿ ಕರೆಯುತ್ತಿದೆ.

ವೀರಾಜಪೇಟೆ-ಸಿದ್ದಾಪುರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾವಾಡಿ ಗ್ರಾಮದಲ್ಲಿದೆ ಮರಣ ಕೆರೆ. ಕಾವಾಡಿ ಗ್ರಾಮದ ನೆಲ್ಲಮಕ್ಕಡ ಐನ್‍ಮನೆಗೆ ತೆರಳುವ ದಾರಿಯ ಸಮೀಪದಲ್ಲಿ ಸ್ಥಿತಗೊಂಡಿದೆ ಈ ಕೆರೆ. ಮಳೆಗಾಲ ಆರಂಭಗೊಂಡಿರುವದರಿಂದ ಕೆರೆ-ತೊರೆ ಮತ್ತು ನದಿಗಳು ತುಂಬಿ ಹರಿಯುತ್ತವೆ. ಜೀವಜಲವನ್ನು ಸಂರಕ್ಷಣೆ ಮಾಡಲು ಸರ್ಕಾರವು ಕೆರೆ ಕಾಲುವೆಗಳಿಗೆ ಸಾವಿರಾರು ಕೋಟಿ ವ್ಯಯ ಮಾಡುತ್ತಿದೆ. ಜಲ ಸಂರಕ್ಷಣೆಗೆ ಸಂಬಂಧಿಸಿದ ಇಲಾಖೆಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿರುವದು ವಿಪರ್ಯಸ. ಕೆರೆಯಲ್ಲಿ ಹೂಳು ತೆಗೆಯದಿರುವದರಿಂದ ಕಾಡು ಗಿಡಗಂಟಿಗಳು ಬೆಳೆದು ರಸ್ತೆಯ ಬದಿಯಲ್ಲಿ ಕೆರೆ ಇದೆ ಎಂದು ತಿಳಿಯುವದಿಲ್ಲ. ಮಳೆಗಾಲದಲ್ಲಿ ಕೆರೆಯ ಭೂಗರ್ಭದಿಂದ ಅಂತರ್ ಜಲ ಹುಟ್ಟಿ ಕೆರೆಯು ತುಂಬಿ ನೀರು ರಸ್ತೆಯ ಮೇಲ್ಭಾಗದಲ್ಲಿ ಹರಿಯುವದರಿಂದ ರಸ್ತೆಯು ಸಂಪೂರ್ಣ ಹಾಳಾಗುತ್ತಿದೆ. ಈ ಪ್ರಮುಖ ರಸ್ತೆಯಲ್ಲಿ ದಿನ ಒಂದಕ್ಕೆ ಐದುನೂರುಕ್ಕಿಂತ ಅಧಿಕ ವಾಹನಗಳು ಸಂಚಾರ ಮಾಡುತ್ತವೆ. ಕೆಲವು ವರ್ಷಗಳ ಹಿಂದೆ ದ್ವಿಚಕ್ರ ಸವಾರ ಕೆರೆಯಲ್ಲಿ ಮುಳುಗಿದ, ಅದು ಕಳೆದ ನಂತರ ಟ್ರ್ಯಾಕ್ಟರ್ ವಾಹನವೂಂದು ಬ್ರೇಕ್ ವಿಫಲಗೊಂಡು ಕೆರೆಯಲ್ಲಿ ಮುಳುಗಿತು ಹೀಗೆ ಹತ್ತು ಹಲವು ಘಟನೆಗಳು ಈ ಕೆರೆಯಲ್ಲಿ ಸಂಭವಿಸಿವೆ. ರಸ್ತೆಯ ಅಂಚು ಮತ್ತು ಕೆರೆಯ ಅಂಚಿನ ಮಧ್ಯೆ ಯಾವದೇ ತಡೆಗೋಡೆಗಳು ನಿರ್ಮಾಣ ವಾಗಿರುವದಿಲ್ಲ.

ಗ್ರಾಮಸ್ಥರು ಹೇಳುವ ಪ್ರಕಾರ ಕಳೆದ 2 ವರ್ಷಗಳ ಹಿಂದೆ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ ಕಳಪೆ ಗುಣಮಟ್ಟದ ಕಾಮಗಾರಿ ಯಿಂದ ನೀರಿನಲ್ಲಿ ಹೋಮವಾಯಿತು. ಅಲ್ಲದೆ ಇಂದಿನವರೆಗೆ ಕೆರೆಯಿಂದ ಹೂಳು ತೆಗೆದಿಲ್ಲ. ಕೆರೆಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಪಂಚಾಯಿತಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಯಾವದೇ ಪ್ರತಿಕ್ರಿಯೆ ಬಾರದೆ ಇರುವದು ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾದಂತೆ ಗೋಚರಿಸುತ್ತದೆ. ಸ್ಥಳದಲ್ಲಿ ಗ್ರಾ.ಪಂ.ಯಾಗಲಿ, ರಸ್ತೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಲೋಕೋಪ ಯೋಗಿ ಇಲಾಖೆಯಾಗಲಿ ಯಾವದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಆದರೆ ಮುಂದೆ ತಿರುವಿದೆ ಎಂಬ ಫಲಕವಿದೆ.

ಕಾರ್ಮಾಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಅವರಲ್ಲಿ ‘ಶಕ್ತಿ’ ಕೇಳಿದಾಗ, ನಾನು ಪಂಚಾಯಿತಿಗೆ ಬಂದು 2 ವರ್ಷ ಸಂದಿದೆ, ಈ ಕೆರೆಗೆ ಯಾವದೇ ಅನುದಾನ ಬಂದಿರುವದಿಲ್ಲ. ಅನುದಾನ ಬಂದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ ಎಂದು ತಮ್ಮ ಅಸಹಾಯಕತೆ ತೋರ್ಪಡಿಸಿದರು.