ವಿಶೇಷ ವರದಿ: ಪಿ.ವಿ. ಪ್ರಭಾಕರ್

ನಾಪೆÇೀಕ್ಲು, ಜೂ. 13: ಸುತ್ತಲೂ ಸುಂದರವಾದ ಮುಗಿಲೆತ್ತರದ ಬೆಟ್ಟಗಳು, ಎಲ್ಲಿ ನೋಡಿದರೂ ಸಮೃದ್ಧ ಹಸಿರು ವನರಾಶಿ, ಪಕ್ಕದಲ್ಲಿಯೇ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿರುವ ಮನೋಹರವಾದ ಜಲರಾಶಿ. ಹಾಲ್ನೊರೆಯುಕ್ಕಿಸುತ್ತಾ ವೈಯಾರದಿಂದ ಹರಿಯುವ ತೊರೆ, ಈ ಭೋರ್ಗರೆತದ ಮೊರೆತದಿಂದಾಗಿ ಸಮೀಪದಲ್ಲಿದ್ದರೂ ಕೂಗಿ ಮಾತನಾಡುವ ಪರಿಸ್ಥಿತಿ.

ಆ ನೀರು ಧುಮುಕುವ ರಭಸದಿಂದ ಮೇಲೇಳುವ ನೊರೆಯ ಹನಿ, ಹನಿ ಇಬ್ಬನಿಯಾಗಿ ಮುಸುಕುವ ವಾತಾವರಣ ವರ್ಣಿಸಲಸಾಧ್ಯ, ಊಹೆಗೆ ನಿಲುಕದ ಚಿತ್ರಣ. ಇದು ಕೊಡಗಿನ ಹೆಸರುವಾಸಿ ಚೇಲಾವರ ಜಲಪಾತದ ದೃಶ್ಯ ಕಾವ್ಯ.

ಮಳೆಗಾಲದಲ್ಲಿ ಕೊಡಗಿಗೆ ಆಗಮಿಸುವ ಪ್ರವಾಸಿಗರ ಮುಖ್ಯ ಆಕರ್ಷಣೆ ಜಲಪಾತಗಳು. ಈ ಜಲಪಾತಗಳು ಕೊಡಗಿನಲ್ಲಿ ಸುರಿಯುವ ಅಧಿಕ ಮಳೆಯಿಂದ ತುಂಬಿ ಹಾಲ್ನೊರೆಯುಕ್ಕಿಸುತ್ತಾ ಧುಮ್ಮಿಕ್ಕುತ್ತಿರುವದನ್ನು ನೋಡುವದೇ ರೋಮಾಂಚನ.

ಇಲ್ಲಿ ಸುರಿಯುವ ಮಳೆಗೂ ಕೊಡಗಿಗೂ ಬಿಡಿಸಲಾರದ ನಂಟು. ಒಮ್ಮೆ ಮಳೆ ಪ್ರಾರಂಭವಾಯಿತೆಂದರೆ ದಿನಗಟ್ಟಲೆ- ತಿಂಗಳುಗಟ್ಟಲೆ ಸುರಿಯುವ ಮಳೆ. ಈ ಮಳೆ ನೀರಿನೊಂದಿಗೆ ಕೊಡಗಿನಲ್ಲಿರುವ ಅಸಂಖ್ಯಾತ ಜಲಪಾತಗಳು ಗಿರಿ ಕಂದರಗಳ ನಡುವಿನಿಂದ ಧಾರೆಯಾಗಿ ಧುಮ್ಮಿಕ್ಕಿ ಭೋರ್ಗರೆಯುತ್ತ ಸಾಗುತ್ತಿದ್ದರೆ ಇವೆಲ್ಲಕ್ಕೂ ಸಂಬಂಧವಿಲ್ಲ ಎಂಬಂತೆ ತನ್ನ ಬಳಕುವ ವಯ್ಯಾರದಿಂದ ತನ್ನದೇ ಆದ ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಲಪಾತವೆಂದರೆ ಚೇಲಾವರ ಜಲಪಾತ.

ಮಳೆಗಾಲದಲ್ಲಿ ನೀರು ತುಂಬಿ ಭೋರ್ಗರೆದು ಧುಮುಕುವಾಗ ಅಬ್ಬಾ! ಆ ಜಲಧಾರೆಯ ಸೌಂದರ್ಯ ವರ್ಣನಾತೀತ. ಸುಮಾರು 80 ಅಡಿ ಅಗಲವಾಗಿ 100 ಅಡಿ ಎತ್ತರದಿಂದ ಧುಮುಕುವ ಜಲಧಾರೆ ನೋಡುಗರಿಗೆ ಬೆಳ್ಮುಗಿಲ ಧಾರೆಯಾಗಿ ಧಾವಿಸುವಂತೆ ತೋರುತ್ತದೆ.

ತಡಿಯಂಡಮೋಳ್ ಶಿಖರದಿಂದ ಹುಟ್ಟುವ ಈ ಜಲಪಾತ ಬೇಸಿಗೆಯಲ್ಲಿ ನಿತ್ರಾಣವಾಗಿರುವಂತೆ ಸಣ್ಣಗೆ ಹರಿಯುತ್ತಾ ಮಳೆಗಾಲ ಪ್ರಾರಂಭವಾದೊಡನೆ ದಷ್ಟಪುಷ್ಟವಾಗಿ ತನ್ನ ರಭಸವನ್ನು ಹೆಚ್ಚಿಸಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

ಚೆಯ್ಯಂಡಾಣೆ ಮುಖ್ಯ ರಸ್ತೆಯಿಂದ 5 ಕಿ.ಮೀ. ದೂರದ ಚೇಲಾವರ ಗ್ರಾಮದಲ್ಲಿ ಭೋರ್ಗರೆಯುತ್ತಾ ಧುಮುಕುತ್ತಾ ತನ್ನದೇ ಆದ ವೈಶಿಷ್ಟ್ಯದಿಂದ ಸಾಗುವ ಈ ಜಲರಾಶಿಯ ಸ್ಥಳಕ್ಕೆ ಚೆಯ್ಯಂಡಾಣೆಯಿಂದ ವಾಹನಗಳಲ್ಲಿ ಕ್ರಮಿಸಿದರೂ ಸ್ವಲ್ಪ ಹಾದಿ ಮಾತ್ರ ಕೊರಕಲು ಕಲ್ಲು, ಅಂಕು ಡೊಂಕು, ತಗ್ಗು ದಿಣ್ಣೆಗಳಿಂದ ಕೂಡಿದೆ. ನಿತ್ಯ ಹರಿದ್ವರ್ಣದ ದಟ್ಟವಾದ ಕಾಡುಗಳಿಂದಾವೃತವಾದ ತೂಂಗ್ ಕೊಲ್ಲಿ ಎಂಬಲ್ಲಿಗೆ ಹೆಜ್ಜೆ ಹಾಕುತ್ತಿದ್ದಂತೆ ಎಡಬದಿಯ ಕಣಿವೆಯಲ್ಲಿ ಆಮೆಯ ಬೆನ್ನಿನಂತೆ ಕಾಣುವ ಕರಿ ಕಲ್ಲು ರಾಶಿಯ ನಡುವಿನ ರುದ್ರ ರಮಣೀಯ ಸೋಮನ ಜಲಪಾತದ ದರ್ಶನವಾಗುತ್ತದೆ. ಈ ಜಲಧಾರೆ ಹರಿದು ಬರುವ ಬಂಡೆಗಳು ಫಕ್ಕನೆ ನೋಟಕ್ಕೆ ಆಮೆಯ ಬೆನ್ನಿನಂತೆ ಕಾಣುವದರಿಂದ ಇದನ್ನು ಆಮೆಪಾರೆ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಸ್ಥಳಿಯರು.

ಜಲ ಕ್ರೀಡೆಗೆ ಬ್ರೇಕ್: ಚೇಲಾವರ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರು ಜಲ ಕ್ರೀಡೆಗೆ ಹೆಚ್ಚಿನ ಉತ್ಸಾಹ ತೋರುತ್ತಿದ್ದರು. ಬಿರುಸಿನ ಮಳೆ, ಕೊರೆವ ಚಳಿಯನ್ನು ಲೆಕ್ಕಿಸದೆ ಪ್ರವಾಸಿಗರು ಇಲ್ಲಿ ಜಲ ಕ್ರೀಡೆಯಾಡುತ್ತಿದ್ದರು. ಈ ಕಾರಣದಿಂದ ಹಲವಾರು ಅಮಾಯಕರ ಪ್ರಾಣಹರಣ ಕೂಡ ಇಲ್ಲಿ ನಡೆದಿದೆ. ಇಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಪ್ರತಿಭಟನೆ ಕೂಡ ನಡೆಸಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಕ್ರಮದ ಭರವಸೆ ನೀಡಿದ್ದರು. ಆದರೂ ಯಾವದೇ ವ್ಯವಸ್ಥೆ ಆಗಿರಲಿಲ್ಲ. ಇದನ್ನು ಮನಗಂಡ ಚೇಲಾವರ ಗ್ರಾಮದ ಜನ ಚೇಲಾವರ ಪ್ರೊಟೆಕ್ಟ್ ಗ್ರೂಪ್ ರಚಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಜಲಪಾತಕ್ಕೆ ಪ್ರವಾಸಿಗರು ಇಳಿಯದಂತೆ ತಡೆ ಬೇಲಿ ನಿರ್ಮಿಸಿ ಸೂಕ್ತ ಭದ್ರತೆ ಒದಗಿಸಿದ್ದಾರೆ. ಇದರಿಂದ ಈಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಚಿತ್ರ ಪ್ರೇಮಿಗಳಿಗೆ ನಿರಾಶೆ: ಜಲಪಾತಕ್ಕೆ ಪ್ರವಾಸಿಗರಿಗೆ ಇಳಿಯಲು ಅವಕಾಶ ನೀಡದ ಹಿನ್ನೆಲೆ ಛಾಯಾಚಿತ್ರ ತೆಗೆಯುವವರಿಗೆ ಅಲ್ಪ ಪ್ರಮಾಣದ ನಿರಾಶೆಯಾದಂತಾಗಿದೆ. ಮೇಲ್ಭಾಗದಲ್ಲಿಯೇ ಜಲಪಾತ ವೀಕ್ಷಿಸಿ ಹಿಂತಿರುಗಬೇಕಾದುದರಿಂದ ಉತ್ತಮ ಚಿತ್ರ ತೆಗೆಯಲು ಇಲ್ಲಿ ಅವಕಾಶವಿಲ್ಲದಂತಾಗಿದೆ.