ಸಿದ್ದಾಪುರ, ಜೂ. 13: ಗ್ರಾಮ, ಪಟ್ಟಣ ಪಂಚಾಯಿತಿ, ನಗರಸಭೆಗಳಿಗೆ ಕಸ ತ್ಯಾಜ್ಯಗಳನ್ನು ಸಾಗಿಸುವ ಸಲುವಾಗಿ ಟ್ರ್ಯಾಕ್ಟರ್, ಟೆಂಪೋ ವಾಹಗಳನ್ನು ಒದಗಿಸಲಾಗುತ್ತಿದೆ. ಅವುಗಳ ನಿರ್ವಹಣೆಗೂ ಅನುದಾನ ಮೀಸಲಿರಿಸಲಾಗುತ್ತದೆ. ಕಸ ಸ್ವಚ್ಛ ಮಾಡುವದೇ ಇದರ ಉದ್ದೇಶ..., ಆದರೆ ಸಿದ್ದಾಪುರ ಪಂಚಾಯಿತಿ ಇದಕ್ಕೆ ತದ್ವಿರುದ್ಧ. ಟ್ರ್ಯಾಕ್ಟರ್‍ನಲ್ಲಿ ತುಂಬಿದ ಕಸವನ್ನು ವಿಲೇವಾರಿ ಮಾಡದೆ ಟ್ರ್ಯಾಕ್ಟರ್ ಸಹಿತ ಮಧ್ಯ ರಸ್ತೆಯಲ್ಲಿ ನಿಲ್ಲಿಸಿ ಸುಮ್ಮನಾಗಿದೆ.

ಸಿದ್ದಾಪುರ - ಮೈಸೂರು ರಸ್ತೆಯಲ್ಲಿ ಕಳೆದ 5 ದಿನಗಳಿಂದ ಕಸ ತುಂಬಿದ ಟ್ರ್ಯಾಕ್ಟರ್ ನಿಂತಿದೆ. ಮಳೆಗೆ ಕಸ ಕೊಳೆತು ನಾರುತ್ತಿದ್ದು, ನೊಣ, ಸೊಳ್ಳೆಗಳು ಸೃಷ್ಟಿಯಾಗಿ ಅಕ್ಕ-ಪಕ್ಕದಲ್ಲಿರುವ ಮನೆಗಳಲ್ಲಿ ಮೂಗು ಮುಚ್ಚಿಕೊಂಡು ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ನೊಣ, ಸೊಳ್ಳೆಗಳಿಂದಾಗಿ ಕಾಯಿಲೆ ಬರುವ ಸಾಧ್ಯತೆಯೂ ಇದೆ. ಟ್ರ್ಯಾಕ್ಟರ್ ತೆರವುಗೊಳಿಸದಿರುವ ಬಗ್ಗೆ ವಾರ್ಡ್ ಸದಸ್ಯರಲ್ಲಿ ಗ್ರಾಮಸ್ಥರು ವಿಚಾರಿಸಿದರೆ, ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸುವಂತೆ ಹೇಳುತ್ತಾರಂತೆ. ಅಧಿಕಾರಿಯನ್ನು ಸಂಪರ್ಕಿಸಿದರೆ ಅಧ್ಯಕ್ಷರಲ್ಲಿ ವಿಚಾರಿಸಿ ಎನ್ನುತ್ತಾರಂತೆ ವಿಧಿಯಿಲ್ಲದೆ ಅಧ್ಯಕ್ಷರಲ್ಲೂ ವಿಚಾರಿಸಿದರೆ ವಿಚಾರಿಸಿದವರನ್ನೇ ಗದರಿಸುತ್ತಾರಂತೆ.

ಏನಿದು ವಿಚಿತ್ರ ಎಂದು ಗ್ರಾಮಸ್ಥರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಅವರುಗಳ ಸ್ಥಿತಿ ಕಸದ ಸಮಸ್ಯೆಯನ್ನೇ ಹೊತ್ತುಕೊಂಡಿರುವ ಅತಿದೊಡ್ಡ ಗ್ರಾ.ಪಂ. ಎಂಬ ಕೀರ್ತಿ ಇರುವ ಸಿದ್ದಾಪುರದ ಕಸಗಳಿಗೆ ಈ ಟ್ರ್ಯಾಕ್ಟರ್‍ಗೆ ಮುಕ್ತಿ ಎಂದೋ...? ಎಂದು ಗ್ರಾಮಸ್ಥರು ಕಾಯುತ್ತಲೇ ಇದ್ದಾರೆ.

- ಅಂಚೆಮನೆ ಸುಧಿ