ಸೋಮವಾರಪೇಟೆ, ಜೂ. 13: ಸಮೀಪದ ಮಸಗೋಡು ಗ್ರಾಮದಲ್ಲಿನ ಕೆರೆ ಭಾರಿ ಮಳೆಗೆ ತುಂಬಿದ್ದು, ಕೆರೆ ಏರಿ ಕುಸಿಯುತ್ತಿರುವದರಿಂದ ಒಡೆಯುವ ಭೀತಿ ಎದುರಾಗಿದೆ. ಇತ್ತೀಚೆಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೂ. 1 ಲಕ್ಷ ವೆಚ್ಚದಲ್ಲಿ ಕೆರೆಯ ಹೂಳೆತ್ತುವದರೊಂದಿಗೆ ಅಭಿವೃದ್ದಿ ಮಾಡಲಾಗಿತ್ತು. ಆದರೆ, ಅವೈಜ್ಞಾನಿಕ ಕಾಮಗಾರಿಯೊಂದಿಗೆ ಕೆರೆಗೆ ತೂಬ್ ಅಳವಡಿಸದೇ ನಿರ್ಮಾಣ ಮಾಡಿರುವದರಿಂದ ಹೆಚ್ಚು ಮಳೆಯಾದ ಸಂದರ್ಭ ಹೆಚ್ಚುವರಿ ನೀರು ಹೊರ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಇದರೊಂದಿಗೆ ಕೆರೆಯ ಹೂಳೆತ್ತಿದ ಮಣ್ಣನ್ನು ಇನ್ನೊಂದು ಭಾಗಕ್ಕೆ ಸುರಿದಿರುವದರಿಂದ ಇದೀಗ ಮಣ್ಣು ಕುಸಿಯುತ್ತಿದೆ. ಮಳೆ ಹೆಚ್ಚಾದಲ್ಲಿ ಕೆರೆ ಒಡೆದು ಹೆಚ್ಚಿನ ಹಾನಿಯಾಗುವದರೊಂದಿಗೆ ರಸ್ತೆಯೂ ಇಲ್ಲದಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.