*ಗೋಣಿಕೊಪ್ಪಲು, ಜೂ. 13: ಮಂಗಳವಾರ ರಾತ್ರಿ ಸುರಿದ ಮಳೆಗೆ ದಕ್ಷಿಣ ಕೊಡಗಿನ ಬಹುತೇಕ ಗದ್ದೆ, ತೋಟಗಳು ಜಲಾವೃತಗೊಂಡಿದ್ದು, ಕೆಲವೆಡೆ ಭೂಕುಸಿತವಾಗಿದೆ.

ವಿ.ಬಾಡಗ ಗ್ರಾಮದ ತೀತಿಮಾಡ ಕುಟುಂಬಸ್ಥರ ಗದ್ದೆ ಏರಿಗಳು ಹೊಡೆದುಹೋಗಿ ಸಂಪೂರ್ಣ ಜಲಾವೃತಗೊಂಡಿದೆ. ಕುಟ್ಟಂದಿ, ಕಂಡಗಾಲ, ರುದ್ರುಗುಪ್ಪೆ, ಬಿ.ಶೆಟ್ಟಿಗೇರಿ ಭಾಗಗಳಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದೆ. ಬೇಗೂರು ಕೊಲ್ಲಿ ಗದ್ದೆಗಳಲ್ಲಿ ಭಾಗಾಂಶ ನೀರು ತುಂಬಿಕೊಂಡಿದೆ. ರಸ್ತೆಯ ಮೇಲ್ಬಾಗದಲ್ಲೂ ನೀರು ನಿಂತು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಬುಧವಾರ ಬೆಳಿಗ್ಗೆ ಜಾವದ ಮಳೆಯ ಆರ್ಭಟಕ್ಕೆ ರಸ್ತೆಯ ಬದಿಗಳು ಕುಸಿದು ಹೋಗಿ ವಾಹನ ಸಂಚಾರಕ್ಕೆ ಅಡಚಣೆ ಆಗಿದೆ. ನಡಿಕೇರಿ ತಿರುವಿನಲ್ಲಿ ಲಾರಿಯೊಂದು ಮುಂಭಾಗದ ಬರುವ ಖಾಸಗಿ ಬಸ್ಸ್‍ಗೆ ಸ್ಥಳಾವಕಾಶ ಮಾಡಿಕೊಡುವ ಸಂದರ್ಭ ರಸ್ತೆಯ ಬದಿಯಲ್ಲಿ ಸಿಲುಕಿಕೊಂಡಿತ್ತು. ಇದ್ದರಿಂದ 2 ಗಂಟೆಗಳ ಕಾಲ ಸಂಚಾರಕ್ಕೆ ಅಡಚಣೆ ಎದುರಾಯಿತು. ಬಾಳೆಲೆ, ನಿಟ್ಟೂರು, ಕಾರ್ಮಾಡು ಭಾಗಗಳಲ್ಲೂ ಮಳೆಯ ತೀವ್ರತೆ ಕಂಡಿದೆ. ಬಿ.ಶೆಟ್ಟಿಗೇರಿಯಲ್ಲಿ 24 ಗಂಟೆಯಲ್ಲಿ 15 ಇಂಚು, ಕುಟ್ಟಂದಿಯಲ್ಲಿ 20 ಇಂಚು, ಬಿರುನಾಣಿಯಲ್ಲಿ 18 ಇಂಚು, ಹೈಸೊಡ್ಲೂರುವಿನಲ್ಲಿ 13.70 ಇಂಚು, ಪೆÇರಾಡುವಿನಲ್ಲಿ 18 ಇಂಚು ಮಳೆಯಾಗಿದೆ. ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ, ಹೊಸೂರು ಭಾಗಗಳಲ್ಲೂ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ 2 ದಿನಗಳಿಂದ ದಕ್ಷಿಣ ಕೊಡಗಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ನೀಡಲಾಗಿತ್ತು. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಜೆ ನೀಡಿದರೂ ಕಾಲೇಜು ವಿಭಾಗದ ಮಕ್ಕಳಿಗೆ ರಜೆ ನೀಡಿರಲಿಲ್ಲ. ಹೀಗಾಗಿ ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ಅಧಿಕಾರಿಗಳು ಮಳೆಯ ವಿವರವನ್ನು ಮೇಲಧಿಕಾರಿಗಳಿಗೆ ಮಾಹಿತಿ ನೀಡದ ಪರಿಣಾಮ ಶಾಲಾ ಕಾಲೇಜು ಮಕ್ಕಳಿಗೆ ರಜೆ ನೀಡುವದರ ಬಗ್ಗೆ ಯಾವದೇ ಮಾಹಿತಿಯಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪೆÇೀಷಕರು ಆರೋಪಿಸಿದರು.

ಗಾಳಿ, ಮಳೆಯ ಅಬ್ಬರಕ್ಕೆ ದಕ್ಷಿಣ ಕೊಡಗಿನಲ್ಲಿ 350ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ. 10 ಟಿ.ಸಿಗಳು ದುರಸ್ತಿಗೆ ಬಂದಿದೆ. ಹೀಗಾಗಿ ಪೆÇನ್ನಂಪೇಟೆ, ಹಳ್ಳಿಗಟ್ಟು, ಕುಂದ, ನಾಲ್ಕೇರಿ, ಹುದಿಕೇರಿ, ಕಾನೂರು, ಕುಟ್ಟ, ಶ್ರೀಮಂಗಲ, ತಿತಿಮತಿ ಭಾಗಗಳಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಕಡಿತಗೊಂಡು ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದಂತಾಗಿದೆ. ಇದೀಗಾಗಲೇ 270 ಕಂಬಗಳನ್ನು ಅಳವಡಿಸಲಾಗಿದ್ದು, ಕುಟ್ಟ, ಬಿರುನಾಣಿ ಭಾಗಗಳಿಗೆ ವಿದ್ಯುತ್ ಕಲ್ಪಿಸಲು ಶ್ರಮ ವಹಿಸುತ್ತಿದ್ದಾರೆ ಎಂದು ಚೆಸ್ಕಾಂ ಹಿರಿಯ ಅಭಿಯಂತರ ಅಂಕಯ್ಯ ಮಾಹಿತಿ ನೀಡಿದ್ದಾರೆ.