ಮಡಿಕೇರಿ, ಜೂ. 13: ಕೊಡಗು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳ ಅಧಿಕಾರ ಅವಧಿ ಕಳೆದ ಏಪ್ರಿಲ್ ವೇಳೆಗೆ ಸಮಾಪ್ತಿಗೊಂಡಿದ್ದು, ಚುನಾವಣೆಗಳ ಹಿನ್ನೆಲೆ ಇದುವರೆಗೆ ಬದಲಿ ಆಯ್ಕೆ ಪ್ರಕ್ರಿಯೆ ನಡೆಯದೆ ತಿಂಗಳುಗಳು ಉರುಳಿ ಹೋಗಿವೆ. ಕರ್ನಾಟಕ ವಿಧಾನಸಭಾ ಚುನಾವಣಾ ಸಂಹಿತೆ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‍ನಿಂದ ಇದುವರೆಗೂ ಜಿಲ್ಲೆಯ ಜನಪ್ರತಿನಿಧಿಗಳು ಯಾವದೇ ಕೆಲಸ ಕಾರ್ಯ ನಿರ್ವಹಿಸುವ ಅಧಿಕಾರ ಕಳೆದುಕೊಂಡಿದ್ದಾರೆ.

ಹೀಗಾಗಿ ಜಿಲ್ಲೆಯಲ್ಲಿ ಗ್ರಾ.ಪಂ.ನಿಂದ ಜಿ.ಪಂ. ತನಕ ಹಾಲಿ ಶಾಸಕರು, ಮೇಲ್ಮನೆ ಸದಸ್ಯರು ಸೇರಿದಂತೆ ಎಲ್ಲಾ ಹಂತದ ಜನಪ್ರತಿನಿಧಿಗಳು ಇದೇ ತಾ. 15ರ ತನಕ ಯಾವದೇ ಅಧಿಕಾರ ನಿರ್ವಹಿಸದಂತೆ ಚುನಾವಣಾ ಆಯೋಗದ ನಿರ್ದೇಶನವಿದೆ. ಪರಿಣಾಮ ಜಿ.ಪಂ. ಅಧ್ಯಕ್ಷ - ಉಪಾಧ್ಯಕ್ಷ ಸಹಿತ ಇತರ ಸಂಸ್ಥೆಗಳ ಜನಪ್ರತಿನಿಧಿಗಳು ಕೂಡ ಸರಕಾರಿ ವಾಹನ ಕೂಡ ಬಳಸುವಂತಿಲ್ಲ.

ಕೊಡಗು ಜಿ.ಪಂ. ಆಡಳಿತ ನಿರ್ವಹಣೆಯಲ್ಲಿ ಜಿ.ಪಂ. ಅಧ್ಯಕ್ಷರು, ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿದ್ದು, ಉಪಾಧ್ಯಕ್ಷರು ಸೇರಿದಂತೆ ಇತರ ನಾಲ್ಕೈದು ಸಮಿತಿಗಳ ಪ್ರತ್ಯೇಕ ಅಧ್ಯಕ್ಷರಾಗಿ ಜನಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಅಧಿಕಾರ ಅವಧಿ 20 ತಿಂಗಳ ಕಾಲಮಿತಿಯಲ್ಲಿ ಪೂರ್ಣಗೊಂಡಿದೆ.

ಈ ತನಕ ಸ್ಥಾಯಿ ಸಮಿತಿಗಳಲ್ಲಿ ಆರೋಗ್ಯ ಮತ್ತು ಶೈಕ್ಷಣಿಕ ಅಧ್ಯಕ್ಷರಾಗಿದ್ದ ಶಶಿ ಸುಬ್ರಮಣಿ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಶ್ರೀನಿವಾಸ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದ ಎಂ.ಕೆ. ವಿಜು ಸುಬ್ರಮಣಿ ಅವಧಿ ಮುಗಿದ ಕಾರಣ ತಟಸ್ಥರಾಗಿ ಉಳಿದಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷಾರಂಭದ ಚಟುವಟಿಕೆಗಳು ಸೇರಿದಂತೆ ಆರೋಗ್ಯ, ಕೃಷಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳ ಸಹಿತ ಆಯಾ ಇಲಾಖೆಗಳ ಅಧಿಕಾರಿ ಗಳು ಜಿ.ಪಂ. ಮುಖ್ಯಕಾರ್ಯನಿರ್ವ ಹಣಾಧಿಕಾರಿಗಳ ನಿರ್ದೇಶನದಲ್ಲಿ ನಿರ್ವಹಿಸುವಂತಾಗಿದೆ.

ಆಕಾಂಕ್ಷಿಗಳೇ ಹೆಚ್ಚು : ಮುಂದಿನ 20 ತಿಂಗಳ ಅವಧಿಗೆ ಬಿಜೆಪಿಯ ಜಿ.ಪಂ. ಸದಸ್ಯರುಗಳಲ್ಲಿ ಈಗಾಗಲೇ ಅನೇಕರು ಈ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದು, ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರ ತೊಡಗಿದ್ದಾರೆ. ಶಿಕ್ಷಣ ಸ್ಥಾಯಿ ಸಮಿತಿಗೆ ನಾಪೋಕ್ಲುವಿನ ಮುರುಳಿ ಕರುಂಬಮ್ಮಯ್ಯ, ಗೋಣಿಕೊಪ್ಪಲುವಿನ ಸಿ.ಕೆ. ಬೋಪಣ್ಣ, ಅಚ್ಚಪಂಡ ಮಹೇಶ್ ಮುಂತಾದವರು ಆಕಾಂಕ್ಷಿಗಳಿದ್ದಾರೆ ಎಂದು ಗೊತ್ತಾಗಿದೆ.

ಇತ್ತ ಕೃಷಿ ಸ್ಥಾಯಿ ಸಮಿತಿಗೆ ಕಿರಣ್ ಕಾರ್ಯಪ್ಪ, ಕುಮಾರ್, ಪೂರ್ಣಿಮಾ ಗೋಪಾಲ್, ದೀಪಕ್ ಮೊದಲಾದವರು ತೆರೆಮರೆಯಲ್ಲಿ ಪ್ರಯತ್ನದಲ್ಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇನ್ನು ಸರೋಜಮ್ಮ, ಕವಿತಾ, ಪ್ರಭಾಕರ್, ಪದ್ಮಾವತಿ ಮೊದಲಾದ ವರು ಯಾವ ಹುದ್ದೆ ನೀಡಿದರೂ ಕೆಲಸ ಮಾಡುವದಾಗಿ ಪಕ್ಷದ ಮುಖಂಡರಲ್ಲಿ ಬೇಡಿಕೆ ಇಟ್ಟಿರುವದಾಗಿ ಹೇಳಲಾಗುತ್ತಿದೆ.

ಮತ್ತೆ ಚುನಾವಣೆ ‘ಗುಮ್ಮ’: ಈಗಾಗಲೇ ಚುನಾವಣೆ ಕಾರಣ ಸ್ಥಾಯಿ ಸಮಿತಿಗಳಿಗೆ ನೇಮಕಾತಿ ನಡೆಯದೆ ಮುಂದೂಡಲ್ಪಟ್ಟಿರುವ ಈ ‘ಗುಮ್ಮ’ ಪ್ರಸಕ್ತ ಕೆಲವು ಗ್ರಾ.ಪಂ. ಕ್ಷೇತ್ರಗಳ ಉಪ ಚುನಾವಣೆಯ ಕಾರಣ ದಿಂದ ವಿಳಂಬಗೊಂಡಿದ್ದು, ಮತ್ತೆ ಪಟ್ಟಣ ಪಂಚಾಯಿತಿ ಚುನಾವಣೆಯ ಕಾರಣಕ್ಕಾಗಿ ಮುಂದೂಡಲ್ಪಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲವೆಂದು ಮೂಲಗಳು ತಿಳಿಸಿದೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಜನಪ್ರತಿನಿಧಿಗಳು, ಸಹಕಾರ ಸಂಸ್ಥೆಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ ಸೇರಿದಂತೆ ಗ್ರಾ.ಪಂ. ತನಕ ಕರ್ತವ್ಯ ನಿರ್ವಹಿಸ ಲಾರದೆ ಕೈ ಕಟ್ಟಿ ಹಾಕಿದಂತಾಗಿದ್ದಾರೆ. ಈಗಿನ ಮಳೆಗಾಲದ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲು ಅಥವಾ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ ಎನ್ನುವದು ವಾಸ್ತವ. ಹೀಗಾಗಿ ಕಾರ್ಯಾಂಗ ವ್ಯವಸ್ಥೆ ಆದಷ್ಟು ಚುರುಕುಗೊಂಡು ಸಾರ್ವಜನಿಕರ ಬೇಕು - ಬೇಡಿಕೆಗಳಿಗೆ ಸ್ಪಂದಿಸಬೇಕಿದೆ.