ಮಡಿಕೇರಿ, ಜೂ. 13: ಪ್ರಸಕ್ತ 2018-19ನೇ ಸಾಲಿನಲ್ಲಿ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯ 3 ತಾಲೂಕುಗಳಲ್ಲಿ ಜಿಲ್ಲೆಯ ಮುಖ್ಯ ಬಹುವಾರ್ಷಿಕ ಬೆಳೆಯಾದ ಕಾಳುಮೆಣಸಿಗೆ ಹಾಗು ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕಿನ ಬಹು ವಾರ್ಷಿಕ ಬೆಳೆಯಾದ ಅಡಿಕೆಗೆ ಅನುಷ್ಠಾನ ಗೊಳಿಸಲಾಗುತ್ತಿದೆ.

ಸರ್ಕಾರದ ನಿರ್ದೇಶನದಂತೆ ಹವಾಮಾನ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ ಆರ್ದತೆ ಮತ್ತಿತರ ಮಾಹಿತಿಗಳನ್ನು ಸ್ಧಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.

ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನ್ವಯ ಕಾಳುಮೆಣಸು ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್‍ಗೆ ರೂ. 47 ಸಾವಿರ ವಿಮಾ ಪರಿಹಾರ ಮೊತ್ತ ನಿಗದಿಯಾಗಿದ್ದು, ರೈತರು ಶೇ. 5 ರಷ್ಟು 2,350. ಪಾವತಿಸಬೇಕಿದೆ.

ಅಡಿಕೆ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಪ್ರತಿ ಹೆಕ್ಟೇರಿಗೆ ರೂ 1.28 ಲಕ್ಷ ರೂ ವಿಮಾ ಪರಿಹಾರ ಮೊತ್ತ ನಿಗದಿ ಮಾಡಲಾಗಿದ್ದು, ರೈತರು ಶೇ. 5 ರಷ್ಟು (ರೂ. 6,400) ಪಾವತಿಸಬೇಕಿದೆ. ಈ ಯೋಜನೆಯಡಿ ವಿಮೆ ನೋಂದಣಿಗೆ ತಾ. 30 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ತೋಟಗಾರಿಕಾ ಇಲಾಖೆಯ ಕಚೇರಿಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ ಎಂದು ಎಂದು ತೋಟಗಾರಿಕಾ ಉಪ ನಿರ್ದೇಶಕರು ಕೋರಿದ್ದಾರೆ.