ವೀರಾಜಪೇಟೆ, ಜೂ. 15: ಕಠಿಣ ಪ್ರರಿಶ್ರಮ ಹಾಗೂ ಏಕಾಗ್ರತೆಯಿಂದ ವಿದ್ಯಾರ್ಥಿಗಳು ತಮ್ಮ ಬದುಕಿನ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಹುಣಸೂರಿನ ತಹಶೀಲ್ದಾರ್ ಅಹಮದ್ ಕುಂಞ ಅಭಿಪ್ರಾಯಪಟ್ಟರು.

ಪಟ್ಟಣದ ಜೈನರ ಬೀದಿಯಲ್ಲಿನ ಚಾಣಕ್ಯ ಕೋಚಿಂಗ್ ಸೆಂಟರ್‍ನಲ್ಲಿ ಆಯೋಜಿಸಿದ್ದ ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆ ಕುರಿತ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶ್ರದ್ಧೆಯಿಂದ ಗುರಿಯ ಕಡೆ ಗಮನಹರಿಸಬೇಕು. ಛಲದಿಂದ ಮುನ್ನಡೆದರೆ ಅಸಾಧ್ಯವಾದುದು ಯಾವದೂ ಇಲ್ಲ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಕಷ್ಟು ಮಾಹಿತಿ ಕೊರತೆಯುಂಟಾಗುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸುವದರಿಂದ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.

ಕಲ್ಪವೃಕ್ಷ ಆರ್ಕೇಡ್‍ನ ಮಾಲೀಕ ಚಂದ್ರಪ್ರಸಾದ್ ಮಾತನಾಡಿ, ತರಬೇತಿ ಕೇಂದ್ರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಗುರಿಯನ್ನು ಈಡೇರಿಸಲು ಪೂರಕವಾಗಿರಬೇಕು ಎಂದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರಿನ ವಿಜಯವಿಠಲ ಕಾಲೇಜಿನ ಪ್ರಾಧ್ಯಾಪಕರಾದ ರಾಜೇಶ್, ಶರತ್ ಕುಮಾರ್, ನವೀನ್ ಕುಮಾರ್ ಹಾಗೂ ಕಾವೇರಿ ಕಾಲೇಜಿನ ಬಿ.ಎಸ್. ಸುದೇಶ್ ಭಾಗವಹಿಸಿ ಆಕಾಂಕ್ಷಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಚಾಣಕ್ಯ ಟ್ರಸ್ಟ್‍ನ ಅಧ್ಯಕ್ಷೆ ಕವಿತಾ, ಕಾರ್ಯದರ್ಶಿ ಮಾಚಮ್ಮ, ನಿರ್ದೇಶಕರಾದ ವಿನೋದ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.