ಗೌರಿ ಹತ್ಯೆ : ಆಘಾತಕಾರಿ ಅಂಶ ಬಯಲು
ಬೆಂಗಳೂರು, ಜೂ. 15: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಎಸ್‍ಐಟಿ ತನಿಖೆಯಲ್ಲಿ ಆಘಾತಕಾರಿ ಸುದ್ದಿಗಳು ಹೊರ ಬೀಳುತ್ತಿವೆ. ಸದ್ಯ ಎಸ್‍ಐಟಿ ಬಂಧಿಸಿರುವ ಆರೋಪಿಗಳ ಪೈಕಿ ಪರಶುರಾಮ್ ವಾಗ್ಮೋರೆ ತಾನೇ ಗೌರಿ ಲಂಕೇಶ್ ಅವರಿಗೆ ಗುಂಡಿಕ್ಕಿರುವದಾಗಿ ಒಪ್ಪಿಕೊಂಡಿದ್ದು ಎಸ್‍ಐಟಿಗೆ ಮಹತ್ವದ ಗೆಲುವು ಸಿಕ್ಕಂತಾಗಿದೆ. ಈ ಮಧ್ಯೆ ಎಸ್‍ಐಟಿಯ ಹಿರಿಯ ಅಧಿಕಾರಿಯೊಬ್ಬರು ಗೌರಿ ಲಂಕೇಶ್, ಎಂಎಂ ಕಲಬುರಗಿ ಮತ್ತು ಮಹಾರಾಷ್ಟ್ರದ ಗೋವಿಂದಾ ಪನ್ಸಾರೆ ಅವರ ಹತ್ಯೆಗೆ ಒಂದೇ ಗನ್ ಅನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ. ಗೌರಿ ಲಂಕೇಶ್, ಎಂಎಂ ಕಲಬುರಗಿ ಮತ್ತು ಗೋವಿಂದಾ ಪನ್ಸಾರೆ ಅವರನ್ನು ಒಂದೇ ಗನ್‍ನಿಂದ ಹತ್ಯೆ ಮಾಡಲಾಗಿದೆ ಎಂಬ ಫೆÇೀರೇನ್ಸಿಕ್ ವರದಿಯಲ್ಲಿ ಧೃಡವಾಗಿದೆ. ಆದರೆ ಸದ್ಯ ಕೃತ್ಯಕ್ಕೆ ಬಳಸಲಾಗಿರುವ ಗನ್ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹತ್ಯೆಗಳ ಹಿಂದೆ ಹಿಂದೂ ಸಂಘಟನೆಯೊಂದು ಕೆಲಸ ಮಾಡುತ್ತಿದ್ದು ಸುಮಾರು 60 ಮಂದಿ ಸದಸ್ಯರನ್ನು ದೇಶದ ಐದು ರಾಜ್ಯಗಳಲ್ಲಿ ಇಂತಹ ಕೆಲಸಕ್ಕೆ ನಿಯೋಜಿಸಲಾಗಿದೆ. ಈ ತಂಡ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದಲ್ಲಿ ಕಾರ್ಯಾಚರಣೆಯಲ್ಲಿದೆ. ಇನ್ನು ಉತ್ತರಪ್ರದೇಶದಲ್ಲಿ ಈ ತಂಡ ಕಾರ್ಯಾಚರಣೆ ನಡೆಸುತ್ತಿರುವದಾಗಿ ಯಾವದೇ ವರದಿ ಇಲ್ಲ ಎಂದು ಹೇಳಿದ್ದಾರೆ.
ಬಸ್-ಕಾರು ಡಿಕ್ಕಿ : ಐವರ ಸಾವು
ಬಳ್ಳಾರಿ, ಜೂ. 15: ಕೆಎಸ್‍ಆರ್‍ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಗು ಸೇರಿ ಐವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಕೋಳೂರು ಬಳಿ ಸಂಭವಿಸಿದೆ. ಕೆಎಸ್‍ಆರ್‍ಟಿಸಿ ಬಸ್ ಸಿರಗುಪ್ಪ ಕಡೆ ತೆರಳುತ್ತಿತ್ತು. ಕಾರು ಬಳ್ಳಾರಿಯತ್ತ ಬರುತ್ತಿದಾಗ ಕೋಳೂರು ಬಳಿ ಮುಖಾಮುಖಿ ಡಿಕ್ಕಿಯಾಗಿದೆ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೆÇಲೀಸರು ಸ್ಥಳೀಯರೊಂದಿಗೆ ಸೇರಿ ಕಾರಿನಡಿ ಸಿಲುಕಿದ್ದ ದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ ಕುರುಗೋಡು ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
3 ನಕ್ಸಲರು ಎನ್‍ಕೌಂಟರ್‍ಗೆ ಬಲಿ
ಛತ್ತೀಸ್‍ಘಡ, ಜೂ. 15: ಭದ್ರತಾ ಪಡೆ ಜತೆಗಿನ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲರು ಎನ್‍ಕೌಂಟರ್‍ಗೆ ಬಲಿಯಾಗಿದ್ದಾರೆ. ಛತ್ತೀಸ್‍ಘಡ ಸುಕ್ಮಾ ಜಿಲ್ಲೆಯಲ್ಲಿ ಈ ಎನ್‍ಕೌಟರ್ ನಡೆದಿದೆ ಎಂದು ಅಧಿಕಾರಿಗಳು ಹೇಳಿದರು. ಸುಮಾರು 10 ಗಂಟೆಗೆ ಚಿಂತಾಗುಫ ಪೆÇಲೀಸ್ ಠಾಣೆ ವ್ಯಾಪ್ತಿಯ ಗಟ್ಟಾಪಾದ್ ಹಾಗೂ ತೋಕನ್ಪಲ್ಲಿ ಗ್ರಾಮಗಳ ನಡುವೆ ಅರಣ್ಯ ಪ್ರದೇಶದಲ್ಲಿ ಈ ಗುಂಡಿನ ಕಾಳಗ ನಡೆದಿದೆ ಎಂದು ಸುಕ್ಮಾ ಪೆÇಲೀಸ್ ಅಧೀಕ್ಷಕ ಅಭಿಷೇಕ್ ಮೀನಾ ಪಿಟಿಐಗೆ ತಿಳಿಸಿದ್ದಾರೆ. ಗುರುವಾರ ರಾತ್ರಿ ರಾಜಧಾನಿ ರಾಯ್‍ಪುರದಿಂದ 500 ಕಿ.ಮೀ. ದೂರದಲ್ಲಿರುವ ಚಿಂತಾಗುಫ ಅರಣ್ಯದಲ್ಲಿ ಜಿಲ್ಲಾ ರಕ್ಷಣಾ ಪಡೆ ಹಾಗೂ ವಿಶೇಷ ಟಾಸ್ಕ್ ಫೆÇೀರ್ಸ್ ಜಂಟಿ ತಂಡ ನಕ್ಸಲ್ ಶೋಧ ಕಾರ್ಯಾಚರಣೆ ಪ್ರಾರಂಭಿಸಿತ್ತು ಎಂದು ಅವರು ಹೇಳಿದ್ದಾರೆ. ಭದ್ರತಾ ಪಡೆಗಳು ಗಟ್ಟಾಪಾದ್ ಹಾಗೂ ತೋಕನ್ಪಲ್ಲಿ ಗ್ರಾಮದ ಅರಣ್ಯಕ್ಕೆ ಬಂಡಾಗ ನಕ್ಸಲರು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಭದ್ರತಾ ಪಡೆಗಳೂ ಸಹ ಧಾಳಿ ಮಾಡಿದ್ದು ನಕ್ಸಲರು ಕಾಡಿನಲ್ಲಿ ನಾಪತ್ತೆಯಾದರು.ಈ ಸಂದರ್ಭ ಭದ್ರತಾ ಪಡೆಗಳು ನಡೆಸಿದ ಶೋಧದಲ್ಲಿ ಮೂವರು ನಕ್ಸಲರ ಮೃತದೇಹಗಳು ಪತ್ತೆಯಾಗಿದೆ.
ಬಾಂಗ್ಲಾ ಗಡಿಯಲ್ಲಿ ಸಿಹಿ ವಿನಿಮಯ
ಸಿಲಿಗುರಿ, ಜೂ. 15: ದೇಶದೆಲ್ಲೆಡೆ ರಂಜಾನ್ ಆಚರಣೆ ಸಂಭ್ರಮ ಮನೆ ಮಾಡಿದ್ದು, ಗಡಿಯಲ್ಲಿ ಯೋಧರು ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಸಿಲಿಗುರಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಮತ್ತು ಬಾಂಗ್ಲಾದೇಶ ಗಡಿ ರಕ್ಷಣಾ ಪಡೆ(ಬಿಬಿಜಿ) ಯೋಧರು ಶುಕ್ರವಾರ ಸಿಹಿ ವಿನಿಯಮ ಮಾಡಿಕೊಂಡಿದ್ದಾರೆ. ಇತ್ತ ದೇಶದಲ್ಲಿ ಮುಸ್ಲಿಂ ಸಮಾಜದ ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಕೇರಳದ ತಿರುವನಂತಪುರದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದು, ಸಂಸದ ಶಶಿತರೂರ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ.
ಅಪಹರಣಕ್ಕೆ ಒಳಗಾಗಿದ್ದ ಯೋಧನ ಹತ್ಯೆ
ಜಮ್ಮು-ಕಾಶ್ಮೀರ, ಜೂ. 15: ಇಲ್ಲಿನ ಪುಲ್ವಾಮಾ ಪ್ರದೇಶದಿಂದ ಗುರುವಾರ ಅಪಹರಣಕ್ಕೆ ಒಳಗಾಗಿದ್ದ ಯೋಧ ಔರಂಗಜೇಬರ ಮೃತದೇಹ ಪತ್ತೆಯಾಗಿದೆ. ತಲೆ ಮತ್ತು ಕತ್ತಿನಲ್ಲಿ ಗುಂಡೇಟಿನ ಗುರುತುಗಳಿವೆ ಎಂದು ಪೆÇಲೀಸರು ತಿಳಿಸಿದ್ದಾರೆ. ಅಪಹರಣಕ್ಕೆ ಒಳಗಾದಾಗ ಔರಂಗಜೇಬ್ ರಂಜಾನ್ ಪ್ರಯುಕ್ತ ರಜೆ ತೆಗೆದುಕೊಂಡಿದ್ದರು. ಅಪಹರಿಸಿದ್ದ ಪ್ರದೇಶದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಇರುವ ಗುಸ್ಸು ಗ್ರಾಮದಲ್ಲಿ ಮೃತದೇಹ ಬಿದ್ದಿದ್ದನ್ನು ಪೆÇಲೀಸ್ ಮತ್ತು ಸೇನಾಪಡೆ ಪತ್ತೆ ಹಚ್ಚಿದೆ. ಸೋಫಿಯಾನಾದ 44 ರಾಷ್ಟ್ರೀಯ ರೈಫಲ್ ಕ್ಯಾಂಪ್ನಲ್ಲಿದ್ದ ಔರಂಗಜೇಬ್ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಶ್ರೀನಗರದಲ್ಲಿ ಹಿರಿಯ ಪತ್ರಕರ್ತ ಹಾಗೂ ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಯೋಧರ ಮೃತದೇಹ ಪತ್ತೆಯಾಗಿದೆ. ಕೇಂದ್ರ ಸರ್ಕಾರ ರಂಜಾನ್ ಪ್ರಯುಕ್ತ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತಾಗಲು ಸೇನಾ ಕಾರ್ಯಾಚರಣೆಗಳನ್ನು ಕಡಿಮೆಗೊಳಿಸಿತ್ತು. ಈ ಅವಧಿಯಲ್ಲಿಯೇ ರಾಜ್ಯದಲ್ಲಿ ಭಯೋತ್ಪಾದಕ ಮತ್ತು ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ.
ನಟರ ವಿರುದ್ಧ ಅಮೇರಿಕಾದಲ್ಲಿ ಮೊಕದ್ದಮೆ
ವಾಷಿಂಗ್‍ಟನ್, ಜೂ. 15: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ನಟರಾದ ರಣವೀರ್ ಸಿಂಗ್, ಪ್ರಭುದೇವ್ ಹಾಗೂ ನಟಿಯರಾದ ಕತ್ರಿನಾ ಕೈಪ್, ಸೊನಾಕ್ಷಿ ಸಿನ್ಹಾ ವಿರುದ್ಧ ಅಮೇರಿಕಾದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಹಣವನ್ನು ತೆಗೆದುಕೊಂಡು ಅಮೇರಿಕಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಈ ನಟರು ನಿರಾಕರಿಸಿದ್ದಾರೆ ಎಂದು ಭಾರತೀಯ ಮೂಲದ ಅಮೇರಿಕಾದ ಪ್ರವರ್ತಕ ಸಂಸ್ಥೆಯೊಂದು ದೂರು ದಾಖಲಿಸಿದೆ. ಈ ಸಂಬಂಧ ಚಿಕಾಗೋ ಮೂಲದ ವಿಬ್ರಾಂತ್ ಮಾಧ್ಯಮ ಸಮೂಹ ಇಲ್ಲಿನೊಯಿಸ್ ಉತ್ತರ ಜಿಲ್ಲಾ ನ್ಯಾಯಾಲದಲ್ಲಿ ತಾ. 10 ರಂದು ದೂರು ದಾಖಲಿಸಿದ್ದು, ಜಿಲ್ಲಾ ನ್ಯಾಯಾಧೀಶ ಶರಣ್ ಜಾನ್ ಸನ್ ಕೊಲೆಮಾನ್ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಸೂಪರ್ ಸ್ಟಾರ್ ಅಕ್ಷಯ್ ಕುಮಾರ್, ಹಿನ್ನೆಲೆ ಗಾಯಕರಾದ ಉದಿತ್ ನಾರಾಯಣ್, ಅಲ್ಕಾ ಯಾಗ್ ನಿಕ್ ಮತ್ತು ಉಷಾ ಮಂಗೇಶ್ಕರ್ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿದೆ. ಒಪ್ಪಂದ ಉಲ್ಲಂಘನೆ ಆರೋಪದ ಮೇಲೆ ಭಾರತೀಯ ಕಲಾವಿದರು ಹಾಗೂ ಅವರ ಏಜೆಂಟ್ ಮ್ಯಾಟ್ರಿಕ್ಸ್ ಇಂಡಿಯಾ ಎಂಟರ್‍ಟೈನ್‍ಮೆಂಟ್ ಕಾನ್ಸೊಲೇಟ್ ಕಂಪನಿ ಮತ್ತು ಯಶ್ ರಾಜ್ ಫಿಲಿಮ್ಸ್ ಕಂಪೆನಿ ವಿರುದ್ಧ ದೂರು ದಾಖಲಾಗಿದೆ.
2ನೇ ದಿನದಲ್ಲೇ ಅಫ್ಘಾನಿಸ್ತಾನಕ್ಕೆ ಸೋಲು
ಬೆಂಗಳೂರು, ಜೂ. 15: ಟೀಂ ಇಂಡಿಯಾ ಹಾಗೂ ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ 262 ರನ್ ಮತ್ತು ಇನ್ನಿಂಗ್ಸ್ ಜಯ ಸಾಧಿಸಿ ಐತಿಹಾಸಿಕ ದಾಖಲೆ ಬರೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನವನ್ನು ಎರಡನೇ ದಿನದಲ್ಲೇ ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದೆ. ಇದಕ್ಕೂ ಮೊದಲು ಭಾರತ ಎರಡೇ ದಿನದಲ್ಲಿ ಯಾವದೇ ಟೆಸ್ಟ್ ಪಂದ್ಯವನ್ನು ಗೆದ್ದಿರಲಿಲ್ಲ. ಆದರೆ ಇದೀಗ ಅಫ್ಘಾನಿಸ್ತಾನದ ವಿರುದ್ಧ 262 ರನ್ ಮತ್ತು ಇನ್ನಿಂಗ್ಸ್ ಜಯ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 474 ರನ್‍ಗಳಿಗೆ ಆಲ್‍ಔಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನ್ ತಂಡ ಖ್ಯಾತ ಸ್ಪಿನ್ನರ್‍ಗಳಾದ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾರ ಮಾರಕ ಬೌಲಿಂಗ್ ಧಾಳಿಗೆ ತತ್ತರಿಸಿದ್ದು 109 ರನ್‍ಗಳಿಗೆ ಆಲ್‍ಔಟ್ ಆಯಿತು. ಭಾರತ ವಿರುದ್ಧ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‍ನಲ್ಲಿ ಅಲ್ಪ ಮೊತ್ತಕ್ಕೆ ಆಲ್‍ಔಟ್ ಆಗಿದ್ದರಿಂದ ಫಾಲೋಆನ್‍ಗೆ ಸಿಲುಕಿತ್ತು. ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನ್ ತಂಡವನ್ನು ಭಾರತ 103 ರನ್‍ಗಳಿಗೆ ಆಲೌಟ್ ಮಾಡಿತು. ಭಾರತ ಪರ ಎಲ್ಲಾ ಬೌಲರ್‍ಗಳು ಉತ್ತಮ ಪ್ರದರ್ಶನ ನೀಡಿದ್ದು ಪಂದ್ಯ ಗೆಲುವಿಗೆ ಕಾರಣವಾಗಿದೆ. ಎರಡು ಇನ್ನಿಂಗ್ಸ್‍ನಲ್ಲಿ ರವೀಂದ್ರ ಜಡೇಜಾ 6 ವಿಕೆಟ್, ಆರ್. ಅಶ್ವಿನ್ 5 ಹಾಗೂ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ತಲಾ 4 ವಿಕೆಟ್‍ಗಳನ್ನು ಪಡೆದಿದ್ದಾರೆ.