ಕೂಡಿಗೆ, ಜೂ. 15: ರಾಜ್ಯದಲ್ಲೇ ಪ್ರಪ್ರಥಮವಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಪ್ರಾರಂಭಗೊಂಡ ಕೂಡಿಗೆ ಕ್ರೀಡಾ ಪ್ರೌಢಶಾಲೆಯು ರಾಜ್ಯ ಮತ್ತು ರಾಷ್ಟ್ರಕ್ಕೆ ಹಲವು ಕ್ರೀಡಾಪಟುಗಳನ್ನು ನೀಡಿದ ಹೆಗ್ಗಳಿಕೆ ಗಳಿಸಿದೆ. ಈ ಶಾಲೆಯು ಖಾಸಗಿ ಕ್ರೀಡಾಶಾಲೆಯ ಮಾದರಿಯಲ್ಲಿ ವ್ಯವಸ್ಥೆ ಹೊಂದಿದೆ. ಕ್ರೀಡಾಶಾಲೆಗೆ ಬೇಕಾಗುವವಂತಹ ರಾಷ್ಟ್ರ ಮಟ್ಟದಲ್ಲಿ ಪಾಲ್ಗೊಳ್ಳಲು ಅರ್ಹತೆಯಿರುವ ಕ್ರೀಡಾಪಟುಗಳಿಗೆ ಬೇಕಾಗುವ ಒಳಕ್ರೀಡಾಂಗಣ ಮತ್ತು ಹೊರ ಕ್ರೀಡಾಂಗಣದ ವ್ಯವಸ್ಥೆಯೂ ಇದೆ.
ಆದರೆ, ಎರಡು ವರ್ಷಗಳಿಂದ ಶಾಲೆಯಲ್ಲಿ 20 ಜಿಮ್ನಾಸ್ಟಿಕ್ ಕ್ರೀಡಾ ವಿದ್ಯಾರ್ಥಿಗಳಿಗೆ ಜಿಮ್ನಾಸ್ಟಿಕ್ ತರಬೇತಿದಾರರು ಇಲ್ಲ. ಹಾಕಿ, ಅಥ್ಲೇಟಿಕ್ಸ್, ವಾಲಿಬಾಲ್‍ಗೆ ಸಂಬಂಧಪಟ್ಟ ತರಬೇತುದಾರರು ಜಿಮ್ನಾಸ್ಟಿಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಹೇಗೆ ಸಾಧ್ಯ ಎಂಬುದು ಪ್ರಶ್ನೆಯಾಗಿದೆ.
ಸರ್ಕಾರ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಜಿಮ್ನಾಸ್ಟಿಕ್ ತರಬೇತುದಾರರನ್ನು ನೇಮಕ ಮಾಡುವದಾಗಿ ಕಳೆದೆರಡು ವರ್ಷಗಳಿಂದ ಹೇಳುತ್ತಾ ಬಂದರೂ, ಇದುವರೆಗೂ ನೇಮಕ ಮಾಡಿಲ್ಲ. ಕಳೆದ ವರ್ಷ ತರಬೇತುದಾರರ ನೇಮಕ ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆದರು. ಕೂಡಿಗೆ ಕ್ರೀಡಾಶಾಲೆಗೆ ನೇಮಕಾತಿ ಮಾಡಿರುವದಿಲ್ಲ. ಜಿಮ್ನಾಸ್ಟಿಕ್ ಆಸಕ್ತ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಸಿಗದೆ, ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ವಿದ್ಯಾರ್ಥಿಗಳ ಪೋಷಕರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಿಲ್ಲೆ ಮತ್ತು ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ಆದಷ್ಟು ಬೇಗ ಜಿಮ್ನಾಸ್ಟಿಕ್ ತರಬೇತುದಾರರನ್ನು ನೇಮಕ ಮಾಡಬೇಕು. ಕೊಡಗು ಕ್ರೀಡಾ ಜಿಲ್ಲೆಯಾಗಿ ದೇಶದಲ್ಲಿ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಬೆಳೆದಿರುವದರಿಂದ ಜಿಮ್ನಾಸ್ಟಿಕ್ ತರಬೇತಿದಾರರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ.