ಸೋಮವಾರಪೇಟೆ, ಜೂ. 15: ಕಳೆದ ಮೇ 31ರಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಗಣೇಶ್ ಅವರ ಕುಟುಂಬಕ್ಕೆ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಅವರು ರೂ. 50 ಸಾವಿರ ವೈಯುಕ್ತಿಕ ನೆರವು ನೀಡಿದ್ದಾರೆ.
ಗಣೇಶ್ ಅವರ ಸಾವಿನಿಂದ ತೀರಾ ಸಂಕಷ್ಟಕ್ಕೆ ತಳ್ಳಲ್ಪಟ್ಟ ಕುಟುಂಬದ ನೆರವಿಗೆ ಹಲವು ದಾನಿಗಳು ಕೈಜೋಡಿಸುತ್ತಿದ್ದು, ವಿ.ಎಂ. ವಿಜಯ ಅವರು ಮೃತರ ಮನೆಗೆ ತೆರಳಿ ಪತ್ನಿ ಸುನಿತಾ ಅವರಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭ ಪ್ರಮುಖರಾದ ಪ್ರಭಾಕರ್, ಅಜೀಶ್ಕುಮಾರ್, ಪಿ.ಡಿ. ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
‘ಶಕ್ತಿ’ ಪ್ರತಿಷ್ಠಾನದಿಂದ ನೆರವು
ಗಣೇಶ್ ಅವರ ಕುಟುಂಬಕ್ಕೆ ‘ಶಕ್ತಿ’ ಪ್ರತಿಷ್ಠಾನದಿಂದ ರೂ. 5 ಸಾವಿರದ ನೆರವು ನೀಡಲಾಯಿತು.
ಕಾಜೂರಿನ ಶಕ್ತಿ ಪತ್ರಿಕೆಯ ಓದುಗ ಅವಿಲಾಶ್ ಅವರು ಮೃತ ಗಣೇಶ್ ಅವರ ಪತ್ನಿ ಸವಿತ ಅವರಿಗೆ ನೆರವಿನ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಸೋಮವಾರಪೇಟೆ ವಿಭಾಗದ ‘ಶಕ್ತಿ’ ಪ್ರತಿನಿಧಿ ವಿಜಯ್ ಹಾನಗಲ್ ಉಪಸ್ಥಿತರಿದ್ದರು.
ಮಿಡಿಯುತ್ತಿರುವ ಸಹೃದಯರ ಮನ: ಕಳೆದ ಮೇ 31ರಂದು ನಡೆದ ಅಪಘಾತದಲ್ಲಿ ಮೃತಪಟ್ಟ ಗಣೇಶ್ ಅವರ ಕುಟುಂಬದ ಸಂಕಷ್ಟವನ್ನು ಎಳೆಎಳೆಯಾಗಿ ತಾ. 11ರ ‘ಶಕ್ತಿ’ಯಲ್ಲಿ ಬಿಚ್ಚಿಡಲಾಗಿತ್ತು.
‘ಕುಟುಂಬದ ಸಂಕಷ್ಟವನ್ನು ಪರಿಚಯಿಸಿದ ಆ ಒಂದು ಸಾವು’ ಶಿರೋನಾಮೆಯಡಿ ಪ್ರಕಟವಾದ ವರದಿ ಹಲವಷ್ಟು ಸಹೃದಯರ ಮನ ತಟ್ಟಿದ್ದು, ಸವಿತ ಅವರ ಖಾತೆಗೆ ಹಣವನ್ನು ಜಮೆ ಮಾಡುತ್ತಿದ್ದಾರೆ. 50 ರೂಪಾಯಿಯಿಂದ ಹಿಡಿದು 15 ಸಾವಿರದವರೆಗೂ ವೈಯುಕ್ತಿಕ ನೆರವು ಹರಿದುಬರುತ್ತಿದೆ.
ಇದರೊಂದಿಗೆ ಮೃತ ಗಣೇಶ್ ಅವರ ಸ್ನೇಹಿತರೂ ಸಹ ನೆರವು ಸಂಗ್ರಹದಲ್ಲಿ ನಿರತರಾಗಿದ್ದಾರೆ. ಕೊಡಗು ಜಿಲ್ಲೆಯ ಮೂಲೆ ಮೂಲೆಯಿಂದ ಸವಿತಾ ಅವರ ಖಾತೆಗೆ ಹಣ ಜಮೆಯಾಗುತ್ತಿದೆ. ತಾ. 11ರಿಂದ ತಾ. 13ರವರೆಗೆ 124 ಮಂದಿ ನೆರವಿನ ಹಸ್ತ ಚಾಚಿದ್ದಾರೆ. ಇವರ ಕುಟುಂಬಕ್ಕೆ ನೆರವಾಗಲೆಂದೇ ಐಗೂರಿನ ವಿಜಯಾ ಬ್ಯಾಂಕ್ನಲ್ಲಿ ಗಣೇಶ್ ಅವರ ಪತ್ನಿ ಸವಿತ ಹೆಸರಿನಲ್ಲಿ ಸ್ನೇಹಿತರು ಖಾತೆ ತೆರೆದಿದ್ದು ಇದುವರೆಗೂ 2.27 ಲಕ್ಷ ಹಣ ಸಂಗ್ರಹವಾಗಿದೆ.
‘ಶಕ್ತಿ’ ಓದುಗ ಸಹೃದಯರೊಂದಿಗೆ ಗಣೇಶ್ ಅವರ ಸ್ನೇಹಿತರು ತಮ್ಮ ಪರಿಚಿತರಿಂದಲೂ ಹಣ ಸಂಗ್ರಹಿಸಿ ಕುಟುಂಬದ ಸಂಕಷ್ಟವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ.
ಹಾಸಿಗೆಯಲ್ಲೇ ದಿನ ಕಳೆಯುವಷ್ಟು ಅಂಗವೈಕಲ್ಯ ಹೊಂದಿರುವ ಎರಡು ಪುಟ್ಟ ಮಕ್ಕಳ ಆರೈಕೆಯಲ್ಲಿ ಮೃತರ ಪತ್ನಿ ಸವಿತ ನಿರತರಾಗಿದ್ದು, ಮತ್ತೋರ್ವ ಮಗಳು 3ನೇ ತರಗತಿ ಕಲಿಯುತ್ತಿದ್ದಾಳೆ. ದೈನೇನ ಸ್ಥಿತಿಯಲ್ಲಿರುವ ಈ ಕುಟುಂಬಕ್ಕೆ ನೆರವಾಗಬಯಸುವ ಸಹೃದಯಿ ದಾನಿಗಳು ಐಗೂರಿನ ವಿಜಯಾ ಬ್ಯಾಂಕ್ನಲ್ಲಿರುವ ಕೆ.ಟಿ. ಸವಿತ, ಖಾತೆ ಸಂಖ್ಯೆ: 125801011001617, ಐಎಫ್ಎಸ್ಸಿ ಸಂಖ್ಯೆ:ವಿಐಜೆಬಿ0001258 ಇಲ್ಲಿಗೆ ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ಮೊ:8762821489ನ್ನು ಸಂಪರ್ಕಿಸಬಹುದು.
-ವಿಜಯ್