ಮಡಿಕೇರಿ, ಜೂ. 15: ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೊಡಗಿನ ಪ್ರವಾಸೋದ್ಯಮ ಹಾಗೂ ಉತ್ಸವಗಳ ಬಗ್ಗೆ ಇತ್ತೀಚೆಗೆ ಆಯೋಜಿಸಲಾಗಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ಅಮ್ಮತ್ತಿಯ ವನ್ಯಜೀವಿ ಛಾಯಾಗ್ರಾಹಕ ಮಾಚಯ್ಯ ಪ್ರಥಮ ಸ್ಥಾನ ಪಡೆದಿದ್ದಾರೆ. ನಾಗರಹೊಳೆ ಯಲ್ಲಿ ಸೆರೆ ಹಿಡಿದಿದ್ದ ಮೂರು ಹುಲಿಗಳ ಚಿತ್ರಕ್ಕೆ ಬಹುಮಾನ ದೊರೆತಿದ್ದು, ರೂ. 5,000 ನಗದು ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡಿದ್ದಾರೆ.
ಪತ್ರಕರ್ತ ವಿಘ್ನೇಶ್ ಎಂ. ಭೂತನಕಾಡು ದ್ವಿತೀಯ ಸ್ಥಾನ ಪಡೆದಿದ್ದು, ರೂ. 3,000 ನಗದು ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡಿದ್ದಾರೆ. ಮಡಿಕೇರಿಯ ಶ್ರೀ ಕಂಚಿಕಾಮಾಕ್ಷಿ ದೇವಾಲಯದಲ್ಲಿ ನಡೆದಿದ್ದ ಮೊಸರು ಕುಡಿಕೆ ಒಡೆಯುವ ದೃಶ್ಯಕ್ಕೆ ಬಹುಮಾನ ದೊರೆತಿದೆ.
ಮಡಿಕೇರಿಯ ಸುಧಾಮ ಪೆರಾಜೆ ಅವರಿಗೆ ತೃತೀಯ ಬಹುಮಾನ ದೊರೆತಿದ್ದು, ನಾಗರಹೊಳೆಯಲ್ಲಿ ಸೆರೆಹಿಡಿದ ಜಿಂಕೆಯ ಚಿತ್ರವಾಗಿದೆ. ರೂ. 2,000 ನಗದು ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡರು.
ಛಾಯಾಚಿತ್ರ ಸ್ಪರ್ಧಾ ವಿಜೇತರಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ತಮ್ಮ ಕಚೇರಿಯಲ್ಲಿ ಪ್ರಶಸ್ತಿ ವಿತರಿಸಿದರು. ಈ ಸಂದರ್ಭ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಜಗನ್ನಾಥ್, ಪ್ರವಾಸಿ ಅಧಿಕಾರಿ ರಾಘವೇಂದ್ರ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ವಿ. ಚೇತನ್ ಹಾಜರಿದ್ದರು.