ಗೋಣಿಕೊಪ್ಪ ವರದಿ, ಜೂ. 15: ಬಾಳೆಲೆ-ನಿಟ್ಟೂರು ಮಾರ್ಗದ ಲಕ್ಷ್ಮಣತೀರ್ಥ ನದಿಗೆ ನೂತನವಾಗಿ ನಿರ್ಮಿಸಿರುವ ನಿಟ್ಟೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಳಪೆ ಕಾಮಗಾರಿಯಾಗಿ ರುವದರಿಂದ ಬಿರುಕು ಬಂದಿದೆ ಎಂದು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಆರೋಪಿಸಿದ್ದಾರೆ.

ಸುಮಾರು ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಿಸಿ ರುವ ಸೇತುವೆಯ ಮದ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೇತುವೆ ನಿರ್ಮಾಣವಾಗಿ ಇದೇ ಮೊದಲ ವರ್ಷದ ಮುಂಗಾರು ಆರಂಭಗೊಂಡಿದೆ. ಈ ಸಂದರ್ಭದಲ್ಲಿಯೇ ಬಿರುಕು ಬಿಟ್ಟಿರುವದು ಆ ಭಾಗದ ಜನರಲ್ಲಿ ಭಯದ ವಾತಾವರಣ ಮೂಡಿಸಿದೆ.

ಈ ಬಗ್ಗೆ ಮಾತನಾಡಿದ ಪ್ರಥ್ಯು, ಹಿಂದಿನಿಂದಲೇ ಕಳಪೆ ಕಾಮಗಾರಿ ಬಗ್ಗೆ ಅನುಮಾನವಿತ್ತು. ಪಿಡಬ್ಲ್ಯುಡಿ ಇಂಜಿನಿಯರ್‍ಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದೆ. ಆದರೂ ಕಳಪೆಯಾಗಿ ನಿರ್ಮಿಸಲಾಗಿದೆ. ವಾಹನಗಳು ಈ ಸೇತುವೆಯ ಮೂಲಕ ಹಾದು ಹೋಗುವದರಿಂದ ಅನಾಹುತ ನಡೆಯುವ ಆತಂಕವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದು, ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು.