ಸೋಮವಾರಪೇಟೆ, ಜೂ. 15: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಪ್ರವಾಸಿಗರ ನೆಚ್ಚಿನ ತಾಣ ಮಲ್ಲಳ್ಳಿ ಜಲಪಾತ ಸೇರಿದಂತೆ ಸೋಮವಾರಪೇಟೆ ವ್ಯಾಪ್ತಿಯ ಸಣ್ಣಪುಟ್ಟ ಜಲಪಾತಗಳು ಮೈದುಂಬಿದ್ದು, ದಾರಿಹೋಕರನ್ನು ತಮ್ಮತ್ತ ಆಕರ್ಷಿಸುತ್ತಿವೆ.ಶಾಂತಳ್ಳಿ ಹೋಬಳಿಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಮಲ್ಲಳ್ಳಿ ಹಾಗೂ ಅಭಿಮಠ ಬಾಚಳ್ಳಿ ಜಲಪಾತಗಳು ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.ಗರ್ವಾಲೆ, ಸೂರ್ಲಬ್ಬಿ, ಮುಟ್ಲು, ಹಮ್ಮಿಯಾಲಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಗರ್ವಾಲೆ ಭಾರತೀಯ ವಿದ್ಯಾಭವನದ ಎದುರಿನ ಜ್ಞಾನಗಂಗಾ ಜಲಪಾತ ಮೈದುಂಬಿದೆ. ಇದರೊಂದಿಗೆ ಮಾದಾಪುರ ಹೊಳೆಯಲ್ಲಿ ಪ್ರಕೃತಿ ನಿರ್ಮಿತವಾಗಿರುವ ಗರ್ವಾಲೆ ಸಮೀಪದ ಮೇದುರ ಜಲಪಾತ ಕಂಗೊಳಿಸುತ್ತಿದೆ. ಐಗೂರು ಗ್ರಾಮದಲ್ಲಿ ಹರಿಯುವ ಚೋರನ ಕೆರೆಯಲ್ಲಿ ನೀರಿನ ಪ್ರಮಾಣ ಅಧಿಕವಿದ್ದು, ದೇವಾಲಯದ ಸಮೀಪದ ಬಂಡೆಕಲ್ಲುಗಳಿಂದ ಧುಮ್ಮಿಕ್ಕುವ ಚೋರನ ಜಲಪಾತ ದಾರಿಹೋಕರನ್ನೂ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಿಸರ್ಗ ರಮಣೀಯ ಸೌಂದರ್ಯದ ನಡುವೆ ಹಾಲ್ನೊರೆ ಸೂಸುತ್ತಾ ಧುಮ್ಮಿಕ್ಕುವ ಜಲಪಾತಗಳು ಪ್ರಕೃತಿ ಪ್ರಿಯರನ್ನು ತಮ್ಮತ್ತ ಸೆಳೆಯುತ್ತಿದ್ದು, ಪ್ರಕೃತಿ ನಿರ್ಮಿತ ಜಲಪಾತಗಳ ಸೊಬಗನ್ನು ಅನುಭವಿಸಲು ವಾರದ ಕೊನೆಯ ದಿನಗಳಲ್ಲಿ ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.