ಮಡಿಕೇರಿ, ಜೂ. 15 : ಒಂದು ವಾರದಿಂದ ಆತಂಕ ಸೃಷ್ಟಿಸಿದ ಮಳೆಯ ತೀವ್ರತೆ ಇಂದು ಕಡಿಮೆಯಾಗುವದರೊಂದಿಗೆ ಕೊಡಗು ಸಹಜ ಸ್ಥಿತಿಯತ್ತ ಮರಳ ತೊಡಗಿರುವ ಸನ್ನಿವೇಶ ಗೋಚರಿಸಿತು. ಜಿಲ್ಲೆಯಲ್ಲಿ ಅಧಿಕ ಮಳೆಯಾಗುವ ತಲಕಾವೇರಿ - ಭಾಗಮಂಡಲ, ಶಾಂತಳ್ಳಿ ಸೇರಿಂತೆ ಇಂದು ಜಿಲ್ಲೆಯಾದ್ಯಂತ ಹಗಲು ವರುಣನ ಕೋಪ ತಣ್ಣಗಾದಂತೆ ಬಾಸವಾಯಿತು.ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ 0.03 ಇಂಚು ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕು 0.06, ವೀರಾಜಪೇಟೆ ತಾಲೂಕು 0.30 ಹಾಗೂ ಸೋಮವಾರಪೇಟೆ ತಾಲೂಕಿಗೆ 0.17ರಷ್ಟು ಮಳೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸರಾಸರಿ 40.91 ಇಂಚು ಮಳೆಯಾದರೆ, ಕಳೆದ ವರ್ಷ ಈ (ಮೊದಲ ಪುಟದಿಂದ) ಅವಧಿಗೆ 17.73 ಇಂಚು ದಾಖಲಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ಅವಧಿಗೆ 54.15 ಇಂಚು ಮಳೆ ದಾಖಲಾಗಿದ್ದು, ಕಳೆದ ಸಾಲಿನಲ್ಲಿ ಈ ಅವಧಿಗೆ 22.10 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಈ ಸಾಲಿನಲ್ಲಿ 38.06 ಇಂಚು ಮಳೆ ಆದರೆ, ಕಳೆದ ಸಾಲಿನಲ್ಲಿ ಈ ವೇಳೆ 16.66. ಇಂಚು ದಾಖಲಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಈ ಸಾಲಿನಲ್ಲಿ 30.56 ಇಂಚು ಮಳೆಯಾಗಿದ್ದು, ಕಳೆದ ವರ್ಷ ಈ ಅವಧಿಗೆ ಕೇವಲ 14.44 ಇಂಚು ಮಳೆ ಗೋಚರಿಸಿತ್ತು.
ಜಿಲ್ಲೆಯೆಲ್ಲೆಡೆ ತುಂಬಿ ಹರಿಯುತ್ತಿದ್ದ ಕಾವೇರಿ ಸಹಿತ ಇತರ ನದಿ ಪಾತ್ರಗಳಲ್ಲಿ ಇಂದು ನೀರು ಇಳಿಮುಖಗೊಂಡು ನಾಲ್ಕಾರು ದಿನಗಳಿಂದ ತಲೆದೋರಿದ್ದ ಆತಂಕ ಜನವಲಯದಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಅಲ್ಲಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೊಳ್ಳುವಂತಾಗಿದೆ.
ವೀರಾಜಪೇಟೆ: ನಿನ್ನೆಯಿಂದಲೇ ಮಳೆ ಪ್ರಮಾಣ ಇಳಿಮುಖ ಗೊಂಡಿದ್ದರಿಂದ ಬೇತ್ರಿಯಲ್ಲಿ ಗ್ರಾಮದ ಕಾವೇರಿ ಹೊಳೆಯ ನೀರಿನ ಪ್ರಮಾಣ ಇಂದಿಗೆ ಸುಮಾರು ಎರಡು ಅಡಿಗಳಷ್ಟು ಕಡಿಮೆಯಾಗಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ವೀರಾಜಪೇಟೆ ವಿಭಾಗದಲ್ಲಿ ಇಂದು ಬೆಳಿಗ್ಗೆ ಕೆಲವು ಗಂಟೆಗಳ ಕಾಲ ಬಿಸಿಲಿನ ವಾತಾವರಣ ಕಂಡು ಬಂತು.
ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರು ನಿನ್ನೆ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು ಜಲಾವೃತವಾದ ಗದ್ದೆ, ತೋಡು, ಕೆರೆಗಳಲ್ಲಿಯೂ ನೀರು ಇಳಿಮುಖವಾಗುತ್ತಿದೆ.
ಕೊಡಗು ಕೇರಳ ಗಡಿ ಪ್ರದೇಶ ಮಾಕುಟ್ಟಕ್ಕೆ ಉಪ ಆಯುಕ್ತ ರಮೇಶ್ ಕೋನರೆಡ್ಡಿ ಅವರೊಂದಿಗೆ ಭೇಟಿ ನೀಡಿದ ಗೋವಿಂದರಾಜು ಮಾಕುಟ್ಟ ವಿಭಾಗದಲ್ಲಿ ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯ ಮುಂದುವರೆದಿದ್ದರೂ ಲಘು ಹಾಗೂ ಭಾರೀ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಮಾಕುಟ್ಟ ಮರಬಿದ್ದ ಸ್ಥಳದಿಂದ ಕೆಲವು ಮೀಟರ್‍ಗಳ ಅಂತರದಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಿಂದ ರಸ್ತೆ ಬದಿಯಲ್ಲಿ ಕೊರೆತ ಉಂಟಾಗಿ ಅಪಾಯದ ಸ್ಥಿತಿಯಲ್ಲಿರುವದರಿಂದ ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳಾಂತರಕ್ಕೆ ಆದೇಶ
ಸಿದ್ದಾಪುರ ವಿಭಾಗದಲ್ಲಿ ನಿನ್ನೆ ಬೆಳಗಿನವರೆಗೂ ಬಿದ್ದ ಭಾರೀ ಮಳೆಗೆ ಪ್ರವಾಹದ ಭೀತಿಯಲ್ಲಿರುವ ಗುಹ್ಯ ಗ್ರಾಮದ ಕಾವೇರಿ ಹೊಳೆಯ ದಡದಲ್ಲಿರುವ 82 ಕುಟುಂಬಗಳು ಹಾಗೂ ಕರಡಿಗೋಡು ಗ್ರಾಮದ 113 ಕುಟುಂಬಗಳು ತಕ್ಷಣ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ತುರ್ತು ನೋಟೀಸ್ ಜಾರಿ ಮಾಡಲಾಗಿದೆ.
ಆದರೆ ಎರಡು ಕಡೆಯಲ್ಲಿ ಯಾವ ಕುಟುಂಬಗಳು ಸ್ಥಳಾಂತರಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ತಿಳಿಸಿದರು. ನಿನ್ನೆ ರಾತ್ರಿಯಿಂದಲೇ ತಾಲೂಕಿನಾದ್ಯಂತ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕರಡಿಗೋಡು ಹಾಗೂ ಗುಹ್ಯದ ಕಾವೇರಿ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವದರಿಂದ ಕುಟುಂಬಗಳು ಆತಂಕಪಡಬೇಕಾಗಿಲ್ಲ ಎಂದು ಗೋವಿಂದರಾಜು ಹೇಳಿದರು.
ಸುಂಟಿಕೊಪ್ಪ : ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕನ್ನು ಜೋಡಿಸುವ ಹಚ್ಚಿನಾಡು ಹಟ್ಟಿಹೊಳೆ ರಸ್ತೆ ಕಾಮಗಾರಿಗೆ, ನಮ್ಮ ಗ್ರಾಮ ನಮ್ಮ ಯೋಜನೆಯ ಅನ್ವಯ 10.5 ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಸಲಾಗಿತ್ತು. 10 ಕಿ.ಮೀ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದಾಗ ದಿಢೀರನೆ ಮಳೆ ಬಂದು ಸಮೀಪದ ಹೊಳೆಯ ಪ್ರವಾಹದಿಂದ ಬರೆ ಕುಸಿದು ರಸ್ತೆಗೆ ಭಾರೀ ಹಾನಿಯಾಗಿದೆ. ಇದೀಗ ಜೆಸಿಬಿಯಿಂದ ರಸ್ತೆಗೆ ಬಿದ್ದ ಮರ, ಮಣ್ಣನ್ನು ತೆಗೆಯುವ ಕೆಲಸದಲ್ಲಿ ಕಾರ್ಮಿಕರು ಮುಂದಾಗಿದ್ದಾರೆ.
ಪ್ರತಿವರ್ಷ ಜೂನ್ ತಿಂಗಳಿನಲ್ಲಿ ಈ ವರ್ಷದಂತೆ ಮಳೆಯಾಗುವದಿಲ್ಲ ಈ ವರ್ಷ ದಿಢೀರ್ ಮಳೆ ಬಂದಿದ್ದರಿಂದ ರಸ್ತೆ ಕಾಮಗಾರಿಗೆ ಹಿನ್ನಡೆಯಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಕಂಬ ಧರೆಗೆ : ಮುಕ್ಕೋಡ್ಲುವಿನಲ್ಲಿ ಹೊಸದಾಗಿ ವಿದ್ಯುತ್ ಕಂಬ ಅಳವಡಿಸಲಾಗಿದ್ದು, ಮಳೆ ಗಾಳಿಗೆ 5 ವಿದ್ಯುತ್ ಕಂಬಗಳು ನೆಲಕಚ್ಚಿದೆ.