ಕುಶಾಲನಗರ, ಜೂ 15: ಕುಶಾಲನಗರ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಕುಶಾಲನಗರ ಹಿತರಕ್ಷಣಾ ವೇದಿಕೆ ಸಮಿತಿ ಆಶ್ರಯದಲ್ಲಿ 4 ದಿನಗಳ ಕಾಲ ನಡೆದ ಅಹೋರಾತ್ರಿ ಧರಣಿ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ಯೋಜನೆ ಪೂರ್ಣಗೊಳಿಸುವ ಬಗ್ಗೆ ಚರ್ಚೆ ನಡೆದಿದ್ದು ಈ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹ ಹಿಂಪಡೆಯಲಾಗಿದೆ ಎಂದು ಸಮಿತಿಯ ಸಂಚಾಲಕ ಕೆ.ಜಿ.ಮನು ತಿಳಿಸಿದ್ದಾರೆ.
ಈ ಸಂಬಂಧ ಗುರುವಾರ ರಾತ್ರಿ ನಡೆದ ಸಮಿತಿಯ ತುರ್ತು ಸಭೆಯಲ್ಲಿ ಕುಡಾ ಮಾಜಿ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ ಅವರು ಧರಣಿ ಹಿಂಪಡೆಯುವಂತೆ ಮಾಡಿದ ಮನವಿ ಮೇರೆಗೆ ತಾತ್ಕಾಲಿಕವಾಗಿ ಧರಣಿ ಅಂತ್ಯಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ಎಸ್.ಎನ್.ನರಸಿಂಹಮೂರ್ತಿ ಜಿಲ್ಲಾಧಿಕಾರಿಗಳು ಮುಂದಿನ ಒಂದು ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಿದ್ದಾರೆ. ಕುಶಾಲನಗರಕ್ಕೆ ಸರಕಾರ ಅನುಮೋದನೆ ನೀಡಿದ ಯೋಜನೆಯೊಂದು ನೆನೆಗುದಿಗೆ ಬಿದ್ದಿದ್ದು ಸ್ಥಳೀಯ ಅಧಿಕಾರಿಗಳು ನೆಪವೊಡ್ಡಿ ಕಾಮಗಾರಿ ಸ್ಥಗಿತಗೊಳಿಸಿರುವದು ಸರಿಯಲ್ಲ. ಈ ಬಗ್ಗೆ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತರುವದರೊಂದಿಗೆ, ಕಂದಾಯ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಸಲಹೆ ನೀಡಿದರು.
ಜೆಡಿಎಸ್ ಜಿಲ್ಲಾ ಪ್ರಮುಖ ಎಂ.ಎಸ್. ರಾಜೇಶ್, 4 ದಿನಗಳ ಹೋರಾಟದ ಮೂಲಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಕಾಮಗಾರಿ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಈ ಸಂದರ್ಭ ಸಮಿತಿಯ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಚಂದ್ರು, ಕೆ.ಎಸ್.ನಾಗೇಶ್, ಎಂ.ಎಸ್.ಹರೀಶ್, ಎಂ.ಎನ್.ಚಂದ್ರಮೋಹನ್, ಮಂಜು, ನಂಜುಂಡಸ್ವಾಮಿ, ಶಿವಾಜಿರಾವ್, ರಾಜೀವ್, ಕೆ.ಎನ್.ದೇವರಾಜ್, ಡಿ.ವಿ.ರಾಜೇಶ್, ಕುಮಾರ್ ಮತ್ತಿತರರು ಇದ್ದರು.
ಕುಶಾಲನಗರ ಒಳಚರಂಡಿ ಯೋಜನೆ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಸ್ಥಳ ಗೊಂದಲ ನಿವಾರಿಸಲು ಯೋಜನೆಯ ಮೂಲ ದಾಖಲೆ ಪರಿಶೀಲನೆಯೊಂದಿಗೆ ಸ್ಥಳವನ್ನು ಮರು ಸರ್ವೆ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮೈಸೂರು ವಿಭಾಗದ ಕಾರ್ಯಪಾಲಕ ಅಭಿಯಂತರ ಪ್ರಸನ್ನಮೂರ್ತಿ ಮಾಹಿತಿ ನೀಡಿದ್ದಾರೆ. ಅವರು ಈ ಬಗ್ಗೆ ತಿಳಿಸಿದ್ದು ಕಾಮಗಾರಿಯ ಅಂದಾಜು ಪಟ್ಟಿಯಂತೆ ಕಾಮಗಾರಿ ನಡೆಸಲು ಸಧ್ಯದಲ್ಲಿಯೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ನಂತರ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾಮಗಾರಿ ಪುನರಾರಂಭಗೊಳ್ಳಲಿದೆ ಎಂದಿದ್ದಾರೆ.