ಮಡಿಕೇರಿ, ಜೂ. 15: ಮಡಿಕೇರಿಯಲ್ಲಿ ಹಣ ಡ್ರಾ ಮಾಡಲು ತೆರಳಿದ ಎಟಿಎಂ ಗ್ರಾಹಕನೊಬ್ಬನ ಕಾರ್ಡ್ ಅಪಹರಿಸಿದ ವಂಚಕನೊಬ್ಬ ವಿವಿಧೆಡೆ ರೂ. 1.90 ಲಕ್ಷ ಹಣ ಡ್ರಾ ಮಾಡಿರುವ ಪ್ರಕರಣ ನಡೆದಿದೆ.

ಇಲ್ಲಿನ ಕೆ.ಯು. ಲೋಕೇಶ್ ಎಂಬವರು ತಮ್ಮ ಕೆನರಾ ಬ್ಯಾಂಕ್ ಕಾರ್ಡಿನಿಂದ ಮುಖ್ಯ ರಸ್ತೆಯ ವಿಜಯಾ ಬ್ಯಾಂಕ್ ಎಟಿಎಂ ಯಂತ್ರದಿಂದ ಹಣ ಪಡೆಯಲು ಮೇ 31 ರಂದು ತೆರಳಿದ್ದಾರೆ. ಕಾರ್ಡ್ ತಳ್ಳಿದರೂ ಹಣ ಬರಲಿಲ್ಲ. ಇವರ ಹಿಂದೆ ನಿಂತಿದ್ದ ಒಬ್ಬಾತ ಸಹಾಯಕ್ಕೆ ಮುಂದಾಗಿದ್ದಾನೆ. ತಾನು ಸಹಾಯ ಮಾಡುವದಾಗಿ ಹೇಳಿದ್ದಾನೆ. ಅವನೆದುರೇ ಲೋಕೇಶ್ ಪಿನ್ ಸಂಖ್ಯೆ ಒತ್ತಿದ್ದಾರೆ.

ಆತ ಎರಡೆರಡು ಬಾರಿ ಯತ್ನಿಸಿ ವಿಫಲವಾದಾಗ ಕಾರ್ಡ್ ಹಿಂತಿರುಗಿಸಿದ್ದಾನೆ. ಆದರೆ ಕೈಚಳಕ ಪ್ರದರ್ಶಿಸಿದ ಆತ ತನ್ನ ಜೇಬಿನಲ್ಲಿದ್ದ ಉಪಯೋಗಕ್ಕೆ ಬಾರದ, ಬೆಂಗಳೂರಿನ ಕಲ್ಲೇಷಿ ಎಂಬವರ ಕಾರ್ಡನ್ನು ಕೊಟ್ಟು ಪರಾರಿ ಆಗಿದ್ದಾನೆ. ಲೋಕೇಶ್‍ಗೆ ಇದರ ಅರಿವಾಗಲಿಲ್ಲ.

ಆದರೆ, ತಾ. 31 ರಿಂದ ವಿಜಯಾ ಬ್ಯಾಂಕಿನ ಅದೇ ಶಾಖೆಯಲ್ಲಿ ವಂಚಕ ಹತ್ತು ಸಾವಿರ ತೆಗೆದಿದ್ದಾನೆ. ಬಳಿಕ ಜಿ.ಟಿ. ವೃತ್ತದ ಬ್ಯಾಂಕ್ ಒಂದರಿಂದ, ಮೈಸೂರು ಹಾಗೂ ಉಡುಪಿಯ ಎಟಿಎಂಗಳಿಂದ ದಿನಕ್ಕೆ ನಲವತ್ತು ಸಾವಿರದಂತೆ ಹಣ ತೆಗೆದಿದ್ದಾನೆ. ಖಾತೆಯಿಂದ 1.90 ಲಕ್ಷ ರೂ. ಕಳೆದ ಬಳಿಕವಷ್ಟೇ ಲೋಕೇಶ್‍ಗೆ ವಂಚನೆಯ ಅರಿವಾಗಿದೆ. ಬ್ಯಾಂಕ್ ಹಾಗೂ ನಗರ ಪೊಲೀಸರಿಗೆ ದೂರು ನೀಡಿ, ನಾಲ್ಕು ದಿನಗಳ ಬಳಿಕ ಕಾರ್ಡನ್ನು ‘ಬ್ಲಾಕ್’ ಮಾಡಿಸಿದ್ದಾರೆ. ತನಿಖೆ ಮುಂದುವರಿದಿದೆ.