ಗೋಣಿಕೊಪ್ಪಲು, ಜೂ. 15: ಶ್ರೀಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರ್ಚಿ ಗ್ರಾಮದ ನಿವಾಸಿ ಕುಪ್ಪಂಡ ಸಂಜು ಅವರಿಗೆ ಸೇರಿದ ಹಸುವಿನ ಮೇಲೆ ಧಾಳಿ ನಡೆಸಿರುವ ಹುಲಿಯು ಒಂದು ಹಸುವನ್ನು ಕೊಂದು ಹಾಕಿದೆ. ಕೊಟ್ಟಿಗೆಯಲ್ಲಿದ್ದ ಮತ್ತೊಂದು ಹಸು ಹಾಗೂ ಕರು ಕೂಡ ಕಾಣೆಯಾಗಿದ್ದು, ಹುಲಿ ಎಳೆದೊಯ್ದಿರಬಹುದೆಂದು ಶಂಕಿಸಲಾಗಿದೆ. ಗುರುವಾರ ಸಂಜೆ ವೇಳೆ ಮನೆಯ ಸಮೀಪವಿರುವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು ಹಾಗೂ ಕರುಗಳ ಮೇಲೆ ಹುಲಿ ಧಾಳಿ ನಡೆಸಿದೆ. ಹಸುವಿನ ಸ್ವಲ್ಪ ಭಾಗವನ್ನು ತಿಂದಿರುವ ಹುಲಿ ಸಮೀಪದ ತೋಟದಲ್ಲಿ ಅಡಗಿರಬಹುದೆಂದು ಅಂದಾಜಿಸಲಾಗಿದೆ. ಸುರಿಯುತ್ತಿರುವ ಮಳೆಯಿಂದ ತೋಟದ ಒಳಗೆ ಪ್ರವೇಶ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಾಗೂ ಹುಲಿ (ಮೊದಲ ಪುಟದಿಂದ) ತೋಟದಲ್ಲೇ ಅಡಗಿರಬಹುದೆಂಬ ಸಂಶಯದಿಂದ ಅರಣ್ಯ ಸಿಬ್ಬಂದಿಗಳು ಹಾಗೂ ನಾಗರಿಕರು ತೋಟ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ. ಬ್ರಹ್ಮಗಿರಿ ಮೀಸಲು ಅರಣ್ಯದಿಂದ ಹುಲಿ ಈ ಭಾಗಕ್ಕೆ ಆಗಮಿಸಿರಬಹುದೆಂದು ಶ್ರೀಮಂಗಲ ವನ್ಯ ಜೀವಿ ವಿಭಾಗದ ಆರ್‍ಎಫ್‍ಓ ವಿರೇಂದ್ರ ಅಭಿಪ್ರಾಯಿಸಿದ್ದಾರೆ.

ಸುದ್ದಿ ತಿಳಿದ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್, ಮುಖಂಡರಾದ ಅಯ್ಯಮಾಡ ಹ್ಯಾರಿ ಸೋಮೇಶ್, ಮಚ್ಚಮಾಡ ರಂಜಿ ಹಾಗೂ ಬಾಚಮಾಡ ಭವಿಕುಮಾರ್, ಅಜ್ಜಮಾಡ ಚಂಗಪ್ಪ ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಭಾಗದಲ್ಲಿ ಹುಲಿ ಸಂಚಾರವಿರುವದರಿಂದ ಆದಷ್ಟು ಬೇಗನೇ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು ಹಾಗೂ ನೊಂದ ರೈತ ಸಂಜುರವರಿಗೆ ಪರಿಹಾರವನ್ನು ಕೂಡಲೇ ವಿತರಿಸಬೇಕೆಂದು ಆಗ್ರಹಿಸಿದರು.

ದ. ಕೊಡಗಿನ ಕೊಟ್ಟಗೇರಿ, ಧನುಗಾಲ, ಮಾಯಮುಡಿ, ಕುರ್ಚಿ, ಬೆಸಗೂರು ಮುಂತಾದ ಭಾಗಗಳಲ್ಲಿ ಜಾನುವಾರುಗಳನ್ನು ಬಲಿ ತೆಗೆದುಕೊಂಡ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಸತತ ಪ್ರಯತ್ನ ನಡೆಸಿದರೂ ಇಲ್ಲಿಯ ತನಕ ಸಫಲತೆ ಕಂಡಿಲ್ಲ. ಇದೀಗ ಕುರ್ಚಿ ಭಾಗದಲ್ಲಿ ಹುಲಿಯ ಸಂಚಾರ ಕಂಡು ಬಂದಿರುವದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಜಾನುವಾರುಗಳು ಹುಲಿಯ ಬಾಯಿಗೆ ಆಹಾರವಾದರೂ ಅಚ್ಚರಿ ಇಲ್ಲ.

- ಹೆಚ್.ಕೆ. ಜಗದೀಶ್