ಮಡಿಕೇರಿ, ಜೂ. 15: ಮಡಿಕೇರಿಯ ತಿರಿಬೊಳ್‍ಚ ಕೊಡವ ಸಂಘ ಹಾಗೂ ಮುಕ್ಕೋಡ್ಲುವಿನ ವ್ಯಾಲಿಡ್ಯೂ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ಮುಕ್ಕೋಡ್ಲುವಿ ನಲ್ಲಿ ವ್ಯಾಲಿಡ್ಯೂ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ಮುಕ್ಕೋಡ್ಲುವಿ ನಲ್ಲಿ ಕೊಡವ ಮಂಗಲತ್ ನೀರ್ ಎಡ್‍ಪಲ್ಲಿ ಮೂಡಿನ ತಡ್‍ತ್ ಆಡುವೊ... ಗಂಗಾಪೂಜೆ ಶಾಸ್ತ್ರದ ಸುಧಾರಣೆ ಕುರಿತ ಜನಜಾಗೃತಿ ಕಾರ್ಯಕ್ರಮ ತಿರಿಬೊಳ್‍ಚ ಸಂಘದ ಅಧ್ಯಕ್ಷೆ ಡಾಟಿ. ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಎಂಎಲ್‍ಸಿ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ನಮ್ಮ ಪೂರ್ವಜರು ಕೊಡವ ಪದ್ಧತಿ, ಸಂಸ್ಕøತಿ, ಆಚಾರ - ವಿಚಾರಗಳನ್ನು ಅರ್ಥಪೂರ್ಣವಾಗಿ ರೂಪಿಸಿದ್ದಾರೆ. ನಾಗರಿಕತೆ ಬೆಳೆದಂತೆ ಆಚಾರ - ವಿಚಾರಗಳಿಗೆ ನವೀನತೆಯ ಸೋಂಕು ಉಂಟಾಗಿ ಮೂಲ ಪದ್ಧತಿಗೆ ಧಕ್ಕೆ ಆಗುತ್ತಿರುವದು ಒಳ್ಳೆಯ ಬೆಳೆವಣಿಗೆ ಅಲ್ಲ. ಪದ್ಧತಿ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸುವಂತಾಗಬೇಕು ಎಂದರು. ತಿರಿಬೊಳ್‍ಚ ಸಂಘದ ಮನವಿಗೆ ಸ್ಪಂದಿಸಿದ ಅವರು ಕೊಡವ ಐನ್‍ಮನೆಗಳನ್ನು ಹೆರಿಟೇಜ್ ಸೆಂಟರ್‍ಗಳೆಂದು ಗುರುತಿಸಿ ಮಾನ್ಯ ಮಾಡಿ ಪುನುರುದ್ಧಾರ ಮಾಡು ವಂತೆಯೂ, ಕೊಡಗಿಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಸ್ಥಾಪಿಸುವಂತೆಯೂ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಸರ್ಕಾರದ ಗಮನ ಸೆಳೆಯುವದಾಗಿ ಭರವಸೆಯಿತ್ತರು.

ಅಧ್ಯಕ್ಷತೆ ವಹಿಸಿದ್ದ ಡಾಟಿ ಪೂವಯ್ಯ ಗಂಗಾ ಪೂಜೆ ವೇಳೆ ವಿಪರೀತ ಮದ್ಯಪಾನ, ಹೊತ್ತು ಗೊತ್ತಿಲ್ಲದೆ ಮದುವಣಗಿತ್ತಿಯನ್ನು ತಡೆದು ವಾಲಗಕ್ಕೆ, ಕುಣಿಯುವದು ತಪ್ಪು, ಮದುವೆ ದಿನವೇ ಬೆಂದೂಟ ನಮ್ಮ ಪದ್ಧತಿಯಲ್ಲ ಎಂದರಲ್ಲದೆ, ನಮ್ಮ ಜತೆ ಎಲ್ಲಾ ಸಂಘ-ಸಂಸ್ಥೆ ಸಮಾಜಗಳು ಕೈಜೋಡಿಸ ಬೇಕೆಂದರು.

ವೇದಿಕೆಯಲ್ಲಿ ಮಕ್ಕಂದೂರು ಕೊಡವ ಸಮಾಜ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಾಲಿಡ್ಯೂ ಮುಖ್ಯಸ್ಥ ಹಂಚೆಟ್ಟಿರ ಮನು ಮುದ್ದಪ್ಪ, ಗ್ರಾ.ಪಂ. ಸದಸು ಕನ್ನಿಕಂಡ ಶ್ಯಾಂ ಸುಬ್ಬಯ್ಯ, ಚಾಮೆರ ದಿನೇಶ್ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸಂವಾದ, ಶಬ್ಧ ಪೈಪೋಟಿಗಳು ನಡೆದವು. ಸಂಘದ ಸಲಹೆಗಾರ ಉಳ್ಳಿಯಡ ಪೂವಯ್ಯ ಅವರು ಸಮಾರೋಪ ಭಾಷಣ ಮಾಡಿದರು. ಕಾಳೇಂಗಡ ಮುತ್ತಪ್ಪ, ಸಾವಿತ್ರಿ ಮುತ್ತಪ್ಪ ಸ್ವಾಗತಿಸಿ, ಜೂನ ವಿಜಯ ಅತಿಥಿ ಪರಿಚಯ ಮಾಡಿದರು. ನಿವ್ಯ ದೇವಯ್ಯ ಪ್ರಾರ್ಥಿಸಿ, ರಾಧ ಪೊನ್ನಪ್ಪ ಕಾರ್ಯಕ್ರಮ ನಿರೂಪಿಸಿದರು.