ಮಡಿಕೇರಿ, ಜೂ. 15: ಜಿಲ್ಲೆಯ ಶಾಫಿ ಮುಸ್ಲಿಂ ಬಾಂಧವರು ಒಂದು ತಿಂಗಳ ದೀರ್ಘ ವ್ರತಾಚರಣೆಯ ಬಳಿಕ ಇಂದು ಈದುಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಎಲ್ಲಾ ಶಾಫಿ ಮಸೀದಿಗಳಲ್ಲಿ ಪೂರ್ವಾಹ್ನ ಒಂಭತ್ತು ಗಂಟೆಗೆ ವಿಶೇಷ ನಮಾಝ್ ನಡೆಯಿತು.ಮಡಿಕೇರಿಯ ಎಂ.ಎಂ. ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಗುರು ಅಬ್ದುಲ್ ಹಮೀದ್ ಮದನಿ ಧರ್ಮೋಪದೇಶ ನೀಡಿದರು. ಬಡ ಬಗ್ಗರಿಗೆ ನೆರವು ನೀಡುವದು ಕೌಟುಂಬಿಕ ಸಂಬಂಧಗಳನ್ನು ನವೀಕರಿಸುವದು, ಬಾಳಿನಲ್ಲಿ ಸಂಭವಿಸಿದ ತಪ್ಪುಗಳಿಗೆ ಭಗವಂತನಲ್ಲಿ ಕ್ಷಮೆ ಯಾಚಿಸುವದು ಇತ್ಯಾದಿ ಸತ್ಕರ್ಮಗಳನ್ನು ನಿರ್ವಹಿಸಲು ಈದುಲ್ ಫಿತರ್ ಅತ್ಯಂತ ಯೋಗ್ಯದಿನವೆಂದು ಹಮೀದ್ ಮದನಿ ಹೇಳಿದರು. ಹಬ್ಬದ ದಿನ ಧರ್ಮ ನಿಷಿದ್ಧವಾದ ವಿನೋದಾವಳಿಗಳಲ್ಲಿ ಪಾಲ್ಗೊಳ್ಳಕೂಡದು ಎಂದು ಅವರು ಜನಾಂಗ ಬಾಂಧವರಿಗೆ ಕರೆಯಿತ್ತರು.ಎಮ್ಮೆಮಾಡು, ಕೊಂಡಂಗೇರಿ, ವೀರಾಜಪೇಟೆ, ಸೋಮವಾರಪೇಟೆ, ಗೋಣಿಕೊಪ್ಪಲು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಫಿ ಮಸೀದಿಗಳಲ್ಲೂ ಹಬ್ಬದ ಮಹತ್ವದ ಕುರಿತು ಧರ್ಮ ಗುರುಗಳು ಮಾಹಿತಿ ನೀಡಿದರು. ಬೆಳಗ್ಗಿನಿಂದಲೇ ಮಳೆ ಬಿಡುವು ಕೊಟ್ಟಿದ್ದರಿಂದ ಹಲವೆಡೆ ಮೆರವಣಿಗೆಗಳೂ ನಡೆದವು. ‘ಅಲ್ಲಾಹು ಅಕ್ಬರ್’ ಎಂಬ ಭಗವಂತನ ಕೀರ್ತನೆ ಮುಗಿಲುಮುಟ್ಟಿತ್ತು. ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಸಂಪ್ರದಾಯದಂತೆ ಬಡವರಿಗೆ ಧಾನ್ಯ ದಾನ ಮಾಡಿದರು.

(ಮೊದಲ ಪುಟದಿಂದ) ಮಡಿಕೇರಿಯ ಬದ್ರಿಯಾ, ಭಟ್ಕಳ್, ಮಸ್ಜಿದುರ್ರಹ್ಮಾ ಹಾಗೂ ಸಲಫಿ ಮಸೀದಿಗಳಲ್ಲಿ ಈದ್ ನಮಾಝ್ ನೆರವೇರಿತು. ಹನಫಿ ಬಾಂಧವರು ತಾ. 16ರಂದು (ಇಂದು) ಹಬ್ಬ ಆಚರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರಪೇಟೆಯಲ್ಲಿ

ಸೋಮವಾರಪೇಟೆ ಮದ್ರಸಾದಲ್ಲಿ ಮುಸ್ಲಿಂ ಸಮುದಾಯ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಹಬ್ಬವನ್ನು ಮುಸಾಲ್ಮಾನ ಶಾಫಿ ಬಾಂಧವರು ಸಂಭ್ರಮದಿಂದ ಆಚರಿಸಿದರು.

ಕಳೆದೊಂದು ತಿಂಗಳಿಂದ ಉಪವಾಸ ವ್ರತವನ್ನು ಆಚರಿಸಿ ಕೊಂಡು ಬಂದ ಮುಸಲ್ಮಾನರು ಗುರುವಾರ ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಶುಕ್ರವಾರ ರಂಜಾನ್ ಹಬ್ಬವನ್ನಾಚರಿಸಿದರು. ಬೆಳಗ್ಗೆ ತಮ್ಮ ವ್ಯಾಪ್ತಿಯ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿ, ಪರಸ್ಪರ ಆಲಂಗಿಸಿಕೊಳ್ಳುತ್ತಾ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಬಜೆಗುಂಡಿ ಖಿಳಾರಿಯಾ ಜುಮಾ ಮಸೀದಿಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆಗಳು ನಡೆದವು. ಈ ಸಂದರ್ಭ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಉಪವಾಸ ವ್ರತವನ್ನು ಬಡವ ಬಲ್ಲಿದನೆಂಬ ಭೇದ-ಭಾವವಿಲ್ಲದೆ ಆಚರಿಸಿಕೊಂಡು ಬರಲಾಗುತ್ತಿದೆ. ಉಪವಾಸ ವ್ರತಾಚರಣೆಯಿಂದ ಮನುಷ್ಯನ ಮನಸ್ಸು, ವ್ಯಕ್ತಿತ್ವ, ಗುಣ, ನಡತೆಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮನುಷ್ಯ ಮತ್ತಷ್ಟು ಸನ್ಮಾರ್ಗದಲ್ಲಿ ಸಾಗಲು ಸಹಕಾರಿಯಾಗುತ್ತದೆ ಎಂದರು.

ಹಬ್ಬದಾಚರಣೆಯ ಅಂಗವಾಗಿ ಮಸೀದಿಯ ಧರ್ಮಗುರು ಹಂಸ ಮಿಸ್ಬಾಯಿಯವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿ, ಸಮಾಜದ ಸುಖ, ಶಾಂತಿ, ಸಹಬಾಳ್ವೆಯೊಂದಿಗೆ ಉತ್ತಮ ಮಳೆ, ಬೆಳೆ, ನಾಡು ಸುಭಿಕ್ಷೆಗಾಗಿ ಪ್ರಾರ್ಥಿಸಲಾಯಿತು.

ಇದರೊಂದಿಗೆ ಪಟ್ಟಣದ ಜಲಾಲಿಯಾ ಮಸೀದಿಯಲ್ಲಿ ಧರ್ಮಗುರು ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಅವರ ನೇತೃತ್ವದಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಆಲೇಕಟ್ಟೆಯಲ್ಲಿರುವ ಖಬರ ಸ್ಥಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.

ಕಲ್ಕಂದೂರು, ತಣ್ಣೀರುಹಳ್ಳ, ಕಾಗಡಿಕಟ್ಟೆ, ಹೊಸತೋಟ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಶಾಫಿ ಬಾಂಧವರು ಸಾಮೂಹಿಕ ಪ್ರಾರ್ಥನೆ ನಡೆಸಿ, ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಸಿದ್ದಾಪುರ

ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ವಿಶೇಷ ಪ್ರಾರ್ಥನೆಯೊಂದಿಗೆ ಪರಸ್ಪರ ಶುಭ ಕೋರಲಾಯಿತು.

ಸುಂಟಿಕೊಪ್ಪ

ಸುಂಟಿಕೊಪ್ಪ ವಿಭಾಗದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಆಚರಿಸಿಕೊಂಡರು.

ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸೀದಿ ಹನಫಿ ಜಮಾಯತ್, ಸುನ್ನಿ ಮುಸ್ಲಿಂ ಜಮಾಯತ್, ಗದ್ದೆಹಳ್ಳ ನೂರೂಲ್ಲಾ ಇಸ್ಲಾಂ ಜಮಾಯತ್ ಗಳಲ್ಲಿ ಜಮಾವಣೆಗೊಂಡ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಮುಸ್ಲಿಂ ಮೌಲವಿಗಳು ವಿಶೇಷ ಪ್ರಾರ್ಥನೆಯನ್ನು ನೇರವೇರಿಸಿದರು. ಪ್ರಾರ್ಥನಾಕೂಟ ನೇರವೇರಿಸಿದ್ದ ನಂತರ ಒಬ್ಬರನ್ನೊಬ್ಬರು ಆಲಿಂಗಿಸಿಕೊಳ್ಳುತ್ತಿದ್ದರು.

ಕುಶಾಲನಗರ : ರಂಜಾನ್ ಹಬ್ಬದ ಅಂಗವಾಗಿ ಕುಶಾಲನಗರದಲ್ಲಿ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಹಿಲಾಲ್ ಮಸೀದಿಯಲ್ಲಿ ಸಮುದಾಯ ಬಾಂಧವರು ಪ್ರಾರ್ಥನೆಯಲ್ಲಿ ತೊಡಗಿದ್ದರು. ಇನ್ನುಳಿದಂತೆ ಶನಿವಾರ (ಇಂದು) ರಂಜಾನ್ ಹಬ್ಬ ಆಚರಣೆ ನಡೆಯಲಿದೆ.