ಕೂಡಿಗೆ, ಜೂ. 15: ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಅನುಕೂಲವಾಗುವಂತೆ ಹಾಗೂ ಕೊಡಗು- ಮೈಸೂರು ಜಿಲ್ಲೆಯ ಸಂಪರ್ಕಕ್ಕೆ ಅನುಕೂಲವಾಗುವಂತೆ ಕಾವೇರಿ ನದಿಗೆ ತೂಗು ಸೇತುವೆ ನಿರ್ಮಾಣ ಮಾಡಬೇಕೆಂದು ತೊರೆನೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂಬಂಧ ಗ್ರಾಮ ಪಂಚಾಯಿತಿಯ ಮಾಸಿಕ ಮತ್ತು ಗ್ರಾಮಸಭೆಗಳಲ್ಲಿ ಕಳೆದ 3 ವರ್ಷಗಳಿಂದಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಈ ಸಾಲಿನಲ್ಲಿ ಕ್ಷೇತ್ರದ ಶಾಸಕರು ಭರವಸೆ ನೀಡಿದ್ದಾರೆ.

ತೂಗು ಸೇತುವೆ ನಿರ್ಮಾಣದಿಂದ ಪಿರಿಯಾಪಟ್ಟಣ ಮತ್ತು ಬೆಟ್ಟದಪುರ ಪ್ರದೇಶಗಳಿಗೆ ಹೋಗಲು ಇಲ್ಲಿನ ರೈತರುಗಳಿಗೆ ಅನುಕೂಲವಾಗಲಿದೆ.

ಅಲ್ಲದೆ, ಚಿಕ್ಕಅಳುವಾರದಲ್ಲಿ ಈಗಾಗಲೇ ಪ್ರಾರಂಭಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ ಹಾಗೂ ರಾಜ್ಯಮಟ್ಟದ ಏಕೈಕ ಪಶುಪಾಲನ ಇಲಾಖೆಯ ಪಶು ವೈದ್ಯಕೀಯ ತರಬೇತಿ ಕೇಂದ್ರ ಈ ಭಾಗದಲ್ಲಿದ್ದು, ಮೈಸೂರು ಜಿಲ್ಲೆಯ ಗಡಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬರಲು ಅನುಕೂಲವಾಗುತ್ತದೆ.

ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ಈಗಾಗಲೇ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಲೆನಾಡು ಅಭಿವೃದ್ಧಿ ಯೋಜನೆಯಡಿಯಲ್ಲಾದರೂ ಈ ಸಾಲಿನಲ್ಲಿ ತೂಗು ಸೇತುವೆ ನಿರ್ಮಾಣದ ಯೋಜನೆಗೆ ಚಾಲನೆ ನೀಡಲು ಪ್ರಯತ್ನಿಸಬೇಕೆಂದು ತೊರೆನೂರು ಸಹಕಾರ ಬ್ಯಾಂಕಿನ ನಿರ್ದೇಶಕ ಕೃಷ್ಣೇಗೌಡ, ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಟಿ. ಗೋವಿಂದ, ಮಾಜಿ ಅಧ್ಯಕ್ಷ ಪಾಂಡುರಂಗ, ಕಾರ್ಯದರ್ಶಿ ಜಗದೀಶ, ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಂದ್ರಪ್ಪ, ಗ್ರಾಮದ ಮುಖಂಡರು ಗಳಾದ ಪಟೇಲ್ ಗುರುಲಿಂಗಪ್ಪ, ಕಿರಣ್, ನವೀನ್ ಕುಮಾರ್, ಅಳುವಾರದಮ್ಮ ದೇವಾಲಯ ಸಮಿತಿ, ವಿವಿಧ ಸಂಘಗಳ ಅಧ್ಯಕ್ಷರು, ಸಹಕಾರ ಸಂಘದ ನಿರ್ದೇಶಕರುಗಳು ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.