ಶ್ರೀಮಂಗಲ, ಜೂ. 15 : ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ನಾಲ್ಕು ದಿನದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿದೆ.
ತೆರಾಲು ಗ್ರಾಮದ ಕಾರ್ಮಿಕ ಗೋಪಾಲ್(65) ತಾ. 12 ರಂದು ಪೊನ್ನಂಪೇಟೆಗೆ ಹೋಗಿ ಬರುವದಾಗಿ ತೆರಳಿ ನಾಪತ್ತೆಯಾಗಿದ್ದರು. ಗುರುವಾರ ತೆರಾಲು ಗ್ರಾಮದ ಪೊದ್ದೇನಿ ನದಿಯಲ್ಲಿ ಅವರ ಶವ ದೊರಕಿದೆ. ಈ ನದಿಗೆ ಅಡ್ಡಲಾಗಿ ಮರದಪಾಲ ನದಿ ದಾಟಲು ಅಳವಡಿಸಲಾಗಿದ್ದು, ನದಿ ದಾಟುವ ವೇಳೆ ಈ ವ್ಯಾಪ್ತಿಯಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದ ನದಿಯ ನೀರಿನ ಮಟ್ಟ ಹೆಚ್ಚಳದೊಂದಿಗೆ ಈ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾದ ಪರಿಣಾಮ ನದಿಯಲ್ಲಿ ಕೊಚ್ಚಿ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ತೆರಾಲು ಗ್ರಾಮದ ಬೊಜ್ಜಂಗಡ ಕಾರ್ಯಪ್ಪ(ರಾಜ) ಅವರಲ್ಲಿ ಕಾರ್ಮಿಕರಾಗಿ ಗೋಪಾಲ್ ಹಾಗೂ ಅವರ ಪತ್ನಿ ಲಕ್ಷ್ಮಿ ಹಲವು ವರ್ಷದಿಂದ ನೆಲೆಸಿದ್ದರು. ನದಿಯ ನೀರಿನ ಮಟ್ಟ ಹಾಗೂ ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಗುರುವಾರ ಗ್ರಾಮಸ್ಥರಿಗೆ ನದಿಯ ಬದಿಯಲ್ಲಿ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಮೃತ ಗೋಪಾಲ್ ಅವರ ಕುಟುಂಬಕ್ಕೆ ಪ್ರಕೃತಿ ವಿಕೋಪ ನೆರವಿನಡಿ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾ.ಪಂ ಸದಸ್ಯ ಬೊಟ್ಟಂಗಡ ಗಿರೀಶ್ ಹಾಗೂ ಬುಟ್ಟಿಯಂಡ ಗಣಪತಿ ಒತ್ತಾಯಿಸಿದ್ದಾರೆ.