ಮಡಿಕೇರಿ, ಜೂ. 15: ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪೆರಾಜೆ ಶಾಖೆಯ ನೂತನ ಗೋದಾಮು ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿ ವಹಿಸಿ ಮಾತನಾಡಿ, 1976 ರಲ್ಲಿ ಪ್ರಾರಂಭವಾದ ಮೂರು ಗ್ರಾಮಗಳನ್ನೊಳಗೊಂಡ ಈ ಸಂಘ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಾ ಜಿಲ್ಲಾ ಕೇಂದ್ರ ಬ್ಯಾಂಕಿನಿಂದಲೂ ಮತ್ತು ರಾಜ್ಯ ಅಪೆಕ್ಸ್ ಬ್ಯಾಂಕಿನಿಂದಲೂ ಪ್ರಶಸ್ತಿ ಗಳಿಸಿದೆ, 42 ವರ್ಷಗಳಿಂದ ವ್ಯವಹರಿಸುತ್ತಿದ್ದ ಸಂಸ್ಥೆ ಇದೀಗ ಪೆರಾಜೆ ಗ್ರಾಮಕ್ಕೆ ಪ್ರತ್ಯೇಕ ಸಹಕಾರ ಸಂಘ ರಚನೆಯಾಗಿ ಪಯಸ್ವಿನಿ ಸಹಕಾರ ಸಂಘದಿಂದ ಬೇರ್ಪಡುವದಾಗಿದೆ. ನೂತನ ಸಂಘ ಕೂಡ ಮುಂಬರುವ ದಿನಗಳಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಳ್ಳಲಿ, ಉದ್ಘಾಟನೆಗೊಂಡ ಗೋದಾಮು ಮಳಿಗೆಯೂ ಕೂಡ ನೂತನ ಸಂಘದ ಅಭಿವೃದ್ಧಿಗೆ ಮೊದಲ ಹೆಜ್ಜೆಯಾಗಲಿ ಎಂದು ಹಾರೈಸಿದರು.

ಉದ್ಘಾಟನೆಯನ್ನು ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ನೆರವೇರಿಸಿ ಮಾತನಾಡಿ, ಊರಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ಸಂಘ ಪ್ರಮುಖ ಪಾತ್ರವಹಿಸುತ್ತದೆ.

ಪೆರಾಜೆ ಗ್ರಾಮದಲ್ಲಿ ಕೂಡಾ ಪ್ರತ್ಯೇಕವಾಗಿ ನೂತನ ಸಹಕಾರ ಸಂಘ ರಚನೆಯಾಗುತ್ತಿದ್ದು, ಪಯಸ್ವಿನಿ ಸಹಕಾರ ಸಂಘಕ್ಕೆ ಸರ್ವಾಂಗೀಣ ಅಭಿವೃದ್ಧಿಗೆ ದುಡಿದ ಸಂಪಾಜೆ, ಚೆಂಬು ಮತ್ತು ಪೆರಾಜೆಯ ಮೂರು ಗ್ರಾಮದ ಹಿರಿಯ ಸಹಕಾರಿಗಳು ಮತ್ತು ಸಿಬ್ಬಂದಿಗಳನ್ನು ನೆನಪಿಸಿಕೊಂಡು ಶ್ಲಾಘಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಸಿಮೆಂಟ್ ಮಳಿಗೆಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಆನಂದ, ಉಪಾಧ್ಯಕ್ಷ ಹೊನ್ನಪ್ಪ ಅಮೆಚೂರು, ನಿರ್ದೇಶಕರುಗಳಾದ ಮೋನಪ್ಪ ಮಾಸ್ತರ್, ಎನ್.ಸಿ. ಅನಂತ, ಆದಂಕುಂಞÂ ಸಂಟ್ಯಾರ್, ತೀರ್ಥಪ್ರಸಾದ್ ಕೋಲ್ಚಾರ್, ದಯಾನಂದ ಪನೆಡ್ಕ, ಬಿ.ಎಸ್. ಮನೋರಮಾ, ರೇಣುಕಾ ಕುಂದಲ್ಪಾಡಿ, ಪಕೀರ ಹರಿಜನ, ವಿನಯ ಕುಮಾರ್ ನೆಡ್ಚಿಲ್ ಉಪಸ್ಥಿತರಿದ್ದರು. ಪೆರಾಜೆ ಪ್ರಾ.ಕೃ.ಪ.ಸ. ಸಂಘ ನಿ, ಪೆರಾಜೆಯ ಪ್ರವರ್ತಕರು, ನಿವೃತ್ತ ಸಿಬ್ಬಂದಿಯವರು ಮತ್ತು ಹಿರಿಯ ಸಹಕಾರಿ ಮುಖಂಡರು ಭಾಗವಹಿಸಿದ್ದರು. ಕಟ್ಟಡ ನಿರ್ಮಾಣದ ಕಂಟ್ರಾಕ್ಟರ್ ಸಿ.ಎಸ್. ಇಸ್ಮಾಯಿಲ್ ಅವರನ್ನು ಉಪಾಧ್ಯಕ್ಷ ಹೊನ್ನಪ್ಪ ಅಮೆಚೂರು ಸನ್ಮಾನಿಸಿದರು.

ಶಾಖಾ ವ್ಯವಸ್ಥಾಪಕಿ ಎಸ್.ಎನ್. ಜಾನಕಿ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಸಿಬ್ಬಂದಿ ಬಿ.ಸಿ. ರೇಣುಕಾಕ್ಷ ಸ್ವಾಗತಿಸಿದರು. ಎಂ.ಆರ್. ಗೋಪಾಲಕೃಷ್ಣ ವಂದಿಸಿದರು.