ಹೆಬ್ಬಾಲೆ, ಜೂ. 15: ಉತ್ತರ ಕೊಡಗಿನ ಗಡಿಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಗೆ ರೈತರು ಕೈಗೊಂಡಿದ್ದ ನೂರಾರು ಎಕರೆ ಕೃಷಿ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಸಮೀಪದ ತೊರೆನೂರು ಹಾಗೂ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರು ಕೈಗೊಂಡಿದ್ದ ಮೆಕ್ಕೆಜೋಳ, ಶುಂಠಿ, ಗೆಣಸು, ತಂಬಾಕು, ಸುವರ್ಣಗೆಡ್ಡೆ, ಕೇನೆ ಮತ್ತಿತರ ಕೃಷಿಗೆ ಹಾನಿಯಾಗಿದೆ. ಒಂದು ವಾರದ ಹಿಂದೆ ರೈತರು ಮೆಕ್ಕೆಜೋಳ ಬಿತ್ತನೆ ಕಾರ್ಯಕೈಗೊಂಡಿದ್ದರು. ಆದರೆ ಜೋಳ ಮೊಳಕೆ ಬರುವ ಮುಂಚೆಯೇ ನೀರಿನಲ್ಲಿ ಮಣ್ಣು ಸಮೇತ ಕೊಚ್ಚಿ ಹೋಗಿದೆ.
ಕೆಲವೆಡೆ ಅರ್ಧ ಅಡಿ ಎತ್ತರ ಬೆಳೆದಿದ್ದ ಬೆಳೆ ಕೂಡ ನೀರಿನಲ್ಲಿ ಮುಳುಗಿ ಕರಗಿ ಹೋಗಿದೆ. ಆರನೇ ಹೊಸಕೋಟೆ ಗ್ರಾಮದ ರೈತರಾದ ಕುಪ್ಪಸ್ವಾಮಿ, ರಂಗ, ರಮೇಶ್, ಎಸ್.ಆರ್. ಮಂಜುನಾಥ್, ರೇವಣ್ಣ, ರವಿ, ಅಕ್ಕಯಮ್ಮ ಎಂಬವರು ತಲಾ ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಜೋಳ, ಕೇನೆ ಗೆಡ್ಡೆ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟ ಉಂಟಾಗಿದೆ. ಸುವರ್ಣಗೆಡ್ಡೆ ಬೆಳೆದು ನಿಂತಿದ್ದು, ಇನ್ನು ಎರಡು ವಾರದಲ್ಲಿ ಗೆಡ್ಡೆ ಅಗೆದು ಮಾರಾಟ ಮಾಡುವ ಹಂತಕ್ಕೆ ಬಂದಿತ್ತು. ಆದರೆ ಅಧಿಕ ಮಳೆಯಿಂದಾಗಿ ಗೆಡ್ಡೆ ಮಣ್ಣಿನಲ್ಲಿ ಕರಗಿ ಹೋಗುತ್ತಿದೆ. ಸಾವಿರಾರು ರೂಪಾಯಿ ಸಾಲ ಮಾಡಿ ಕೈಗೊಂಡಿದ್ದ ಕೃಷಿ ಕೈಗೆ ಬರುವ ಮುನ್ನವೇ ಮಣ್ಣುಪಾಲಾಗಿದೆ ಎಂದು ರೈತ ಸುರೇಶ್ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಗಡಿಭಾಗದ ಪ್ರದೇಶಗಳಲ್ಲಿ ರೈತರಿಗೆ ಆಗಿರುವ ಬೆಳೆ ನಷ್ಟವನ್ನು ಜಿಲ್ಲಾಡಳಿತ ಕೂಡಲೇ ಪರಿಹಾರ ನೀಡುವ ಮೂಲಕ ಅವರ ಆರ್ಥಿಕ ಸಂಕಷ್ಟವನ್ನು ದೂರ ಮಾಡಬೇಕು ಎಂದು ರೈತ ಸಂಘದ ಅಧ್ಯಕ್ಷ ಮಂಜುನಾಥ್ ಒತ್ತಾಯಿಸಿದ್ದಾರೆ. ಸಹಕಾರ ಸಂಘಗಳಲ್ಲಿ ಸಾಲ ಮಾಡಿ ಕೈಗೊಂಡಿದ್ದ ಕೃಷಿ ಮಳೆಪಾಲಾಗಿದ್ದು, ನಷ್ಟ ಅನುಭವಿಸಿರುವ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.