ಮಡಿಕೇರಿ, ಜೂ. 15: ಮಹಿಳೆಯರ ದೇಹದಲ್ಲಿ ವಿಟಮಿನ್‍ಗಳ ಕೊರತೆ ಇದ್ದು, ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಆಹಾರಗಳನ್ನು ಹೆಚ್ಚಿಗೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹೇಳಿದರು. ಬೆಳ್ತಂಗಡಿಯ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ಘಟಕದ ಜಂಟಿ ಆಶ್ರಯದಲ್ಲಿ ಇಲ್ಲಿನ ಕಾವೇರಿ ಹಾಲ್‍ನಲ್ಲಿ ನಡೆದ ಸಿರಿಧಾನ್ಯಗಳ ಆಹಾರ ಮೇಳ, ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರು ಮಕ್ಕಳಿಗೆ ಪುರುಷರಿಗೆ ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಆಹಾರಗಳನ್ನು ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಸಿರಿಧಾನ್ಯಗಳ ಆಹಾರಗಳನ್ನು ಬೆಳೆಸಿ ಸೇವಿಸುವಂತೆ ಸಲಹೆ ನೀಡಿದರು.

ಮುಖ್ಯ ಅತಿಥಿ ನಗರ ಠಾಣಾಧಿಕಾರಿ ಷಣ್ಮುಗಂ ಮಾತನಾಡಿ, ಹಿಂದಿನ ಆಹಾರ ಪದ್ಧತಿಗೂ ಇಂದಿನ ಪದ್ಧತಿಗೂ ವ್ಯತ್ಯಾಸವಿದೆ. ಜನಿಸಿದ ಮಗುವಿನಿಂದಲೇ ಕಾಯಿಲೆಗಳು ಕಾಣಿಸುತ್ತಿವೆ ಎಂದರು. ಪ್ರಸ್ತುತ ಪ್ರತಿಯೊಬ್ಬರೂ ಒತ್ತಡಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ದೈನಂದಿನ ಆಹಾರಗಳನ್ನು ಸಿರಿಧಾನ್ಯಗಳಿಂದ ಸಿದ್ಧಪಡಿಸಿ ಸೇವಿಸುವಂತೆ ಸಲಹೆ ನೀಡಿದರು.

ಆಧುನಿಕ ಕಾಲದ ಕಾಯಿಲೆ ಪ್ರೇರಿತ ಆಹಾರ ಪದ್ಧತಿಯನ್ನು ತ್ಯಜಿಸಿ ಸಿರಿಧಾನ್ಯ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಧರ್ಮಸ್ಥಳ ಗ್ರಾಮೋದ್ಯೋಗ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಎ. ಯೋಗೇಶ್ ಹೇಳಿದರು.

ಹಿರಿಯರು ಸಿರಿ ಧಾನ್ಯಗಳನ್ನು ಬಳಸುತ್ತಿದ್ದ ಕಾರಣ ಆರೋಗ್ಯವಾಗಿದ್ದರು. ಇದೀಗ ಮತ್ತೆ ಸಿರಿಧಾನ್ಯಗಳ ಅಗತ್ಯತೆಯ ಕಾಲ ಬಂದಿದೆ ಎಂದರು.

ಬೆಳೆಗಳಿಗೆ ರಸಗೊಬ್ಬರ ಹಾಕುವದರಿಂದ ಕಾಯಿಲೆಗಳು ಕಾಣಿಸುತ್ತಿವೆ. ರೈತರು ಸಿರಿಧಾನ್ಯ ಬೆಳೆಗಳನ್ನು ಬೆಳೆಸುವದು ಉತ್ತಮ ಎಂದು ಸಲಹೆ ನೀಡಿದರು. ಸಂಸ್ಥೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅರುಣ ಬಾನಂಗಡ ಮಾತನಾಡಿ, ಹಿರಿಯರು ಆರೋಗ್ಯವಾಗಿದ್ದರು. 70 ರಿಂದ 100 ವರ್ಷಗಳ ಕಾಲ ಬದುಕಿದ ಇತಿಹಾಸವಿದೆ. ಆದರೆ ಈಗಿನವರಿಗೆ ಹುಟ್ಟಿದಾಗಲೇ ಕಾಯಿಲೆಗಳು ಕಾಡುತ್ತಿರುತ್ತವೆÉ ಎಂದು ಹೇಳಿದರು.

ಈಗಿನ ಆಹಾರ ಪದ್ಧತಿಯನ್ನು ತೊರೆದು ಅಂದಿನ ಪುಷ್ಠಿದಾಯಕ ಆರೋಗ್ಯವನ್ನು ಕಾಯ್ದುಕೊಳ್ಳುವಂತೆ ಸಲಹೆ ಮಾಡಿದರು.

ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ ಮಾತನಾಡಿದರು. ವೀರಾಜಪೇಟೆ ತಾಲೂಕು ಶ್ರೀ ಧರ್ಮಸ್ಥಳ ಗ್ರಾಮೋದ್ಯೋಗ ಯೋಜನೆಯ ಯೋಜನಾಧಿಕಾರಿ ಸದಾಶಿವ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭಾ ಸದಸ್ಯೆ, ಧರ್ಮಸ್ಥಳ ಗ್ರಾಮೋದ್ಯೋಗ ಯೋಜನೆಯ ಸೇವಾ ಪ್ರತಿನಿಧಿ ಲೀಲಾ ಶೇಷಮ್ಮ ವಂದಿಸಿದರು.