ಶ್ರೀಮಂಗಲ, ಜೂ. 15: ಕೊಡಗು ಮೂಲಕ ಮೈಸೂರು-ತಲಚೇರಿ ರೈಲ್ವೆ ಮಾರ್ಗದ ಯಾವದೇ ಪ್ರಸ್ತಾವನೆಯೇ ಇಲ್ಲ ಎಂದು ಸಂಸದರು ಹಾಗೂ ಶಾಸಕರು ಹೇಳಿಕೆ ನೀಡುತ್ತಾ ಬಂದ ಬೆನ್ನಲ್ಲೇ ಇದೀಗ ಈ ಯೋಜನೆಯ ಸರ್ವೆ ಕಾರ್ಯವನ್ನು ಕೈಗೆತ್ತಿಕೊಂಡಿರುವದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಈ ಕುರಿತಂತೆ ಈ ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟಿರುವ ಬಗ್ಗೆ ಮುಂದಿನ ಹದಿನೈದು ದಿನಗಳಲ್ಲಿ ಸರ್ಕಾರದ ಅಧಿಕೃತ ಆದೇಶವನ್ನು ಜನರ ಮುಂದೆ ಬಿಡುಗಡೆ ಮಾಡುವ ಮೂಲಕ ಜನರಲ್ಲಿ ಮೂಡಿರುವ ಆತಂಕ ಹಾಗೂ ಸಂಶಯವನ್ನು ದೂರಮಾಡಬೇಕೆಂದು ಕೊಡಗು ರೈಲ್ವೆ ವಿರೋಧಿ ಹೋರಾಟ ವೇದಿಕೆ ಒತ್ತಾಯಿಸಿದೆ.
ವೇದಿಕೆಯ ಅಧ್ಯಕ್ಷ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಸಭೆಯಲ್ಲಿ ಹಲವು ಪ್ರಮುಖ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.
ರೈಲ್ವೆ ಹೋರಾಟ ವೇದಿಕೆಯಿಂದ ಫೆ.18ಕ್ಕೆ ಮೈಸೂರಿನಲ್ಲಿ ಪ್ರತಿಭಟನೆ ನಡೆದು ಈ ಯೋಜನೆ ತಡೆಯುವಂತೆ ಒತ್ತಾಯಿಸಲಾಗಿತ್ತು. ಈ ಸಂದರ್ಭ ಮಾತನಾಡಿದ್ದ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರದಿಂದ ಕೊಡಗು ಮೂಲಕ ಕೇರಳಕ್ಕೆ ಯಾವದೇ ರೈಲ್ವೆ ಯೋಜನೆಯ ಪ್ರಸ್ತಾವನೆ ಇಲ್ಲ. ಒಂದು ವೇಳೆ ಅಂತಹ ಪ್ರಸ್ತಾವನೆ ಕೇಂದ್ರಕ್ಕೆ ಬಂದಲ್ಲಿ ಅದನ್ನು ಯಾವದೇ ಕಾರಣಕ್ಕೂ ಅನುಮೋದನೆ ನೀಡಲು ಬಿಡುವದಿಲ್ಲ ಎಂದು ಭರವಸೆ ನೀಡಿ ದ್ದರು. ಅಲ್ಲದೆ, ಆಗಿನ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು ಸಹ ಈ ಯೋಜನೆಯನ್ನು ಸರಾಸಗಟವಾಗಿ ವಿರೋಧಿಸುವದಾಗಿ ಸ್ಪಷ್ಠಿಕರಣ ನೀಡಿದ್ದರು. ಆದರೆ, ಇದೀಗ ಕೊಂಕಣ್ ರೈಲ್ವೆ ಕಾರ್ಪೋರೇಷನ್ ಅಧಿಕಾರಿಗಳು ದ.ಕೊಡಗಿನಲ್ಲಿ ರೈಲ್ವೆ ಮಾರ್ಗದ ಸರ್ವೇಕಾರ್ಯದಲ್ಲಿ ತೊಡಗಿರುವದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಆದ್ದರಿಂದ ಜಿಲ್ಲೆಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಪತ್ರಿಕೆ ಹೇಳಿಕೆಯನ್ನು ನೀಡುವದನ್ನು ಬಿಟ್ಟು, ಈ ಕುರಿತಂತೆ ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟಿರುವ ಬಗ್ಗೆ ಮುಂದಿನ 15 ದಿನಗಳ ಅವಧಿಯೊಳಗೆ ಸರ್ಕಾರಿ ಆದೇಶವನ್ನು ಜನರ ಮುಂದೆ ಬಿಡುಗಡೆ ಮಾಡುವದರ ಮೂಲಕ ಆತಂಕವನ್ನು ದೂರ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೊಡಗು ರೈಲ್ವೆ ವಿರೋಧಿ ಹೋರಾಟ ವೇದಿಕೆಯು ಉದ್ದೇಶಿತ ರೈಲ್ವೇ ಯೋಜನೆ ವಿರುದ್ಧ ಕಳೆದ ಹಲವು ವರ್ಷಗಳಿಂದ ಜನಜಾಗೃತಿ ಸಭೆ, ಪ್ರತಿಭಟನೆ ಮೂಲಕ ಈ ಯೋಜನೆಯನ್ನು ವಿರೋಧಿಸುವ ಮೂಲಕ ಯೋಜನೆ ಕೈಬಿಡುವಂತೆ ಹೋರಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಘಟನೆಯೊಂದಿಗೆ ಕೊಡಗಿನ ಪ್ರಮುಖರ ನಿಯೋಗ ಕೇಂದ್ರ ರೈಲ್ವೆ ಸಚಿವ ಪಿಯೂಸ್ ಗೋಯಾಲ್ ಅವರನ್ನು ಭೇಟಿ ಮಾಡಿದ್ದ ಸಂದರ್ಭ ಸಚಿವರು ಅಂತಹ ಯಾವದೇ ಯೋಜನೆ ನಮ್ಮ ಪ್ರಸ್ತಾವನೆಯಲ್ಲಿ ಇಲ್ಲ ಎಂದಿದ್ದರು. ಅಲ್ಲದೆ, ಈ ಯೋಜನೆ ಕೊಡಗಿನ ಮೂಲಕ ಯಾವದೇ ಕಾರಣಕ್ಕೆ ಆಗುವದಿಲ್ಲ ಎಂದು ಭರವಸೆ ನೀಡಿದ್ದರು.
ಇಷ್ಟೇ ಅಲ್ಲದೆ, ಹಿಂದಿನ ಸರ್ಕಾರ ದಲ್ಲಿ ಉಸ್ತುವಾರಿ ಸಚಿವರಾಗಿದ್ದ ಸೀತಾರಾಮ್ ಅವರು ಯೋಜನೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಹಾಗೂ ವಿಧಾನಸಭಾ ಅಧಿವೇಶನದಲ್ಲೂ ಸಹ ಈ ಯೋಜನೆಯನ್ನು ವಿರೋಧಿಸಿ ದ್ದಾರೆ. ನಂತರ ನಡೆದ ರೈಲ್ವೆ ವಿರೋಧಿ ಹೋರಾಟ ಸಮಿತಿ ಚಳುವಳಿಯಲ್ಲಿ ಕಾಂಗ್ರೆಸ್ ಎಐಸಿಸಿ ವಕ್ತಾರ ಬ್ರೀಜೇಶ್ ಕಾಳಪ್ಪ ಅವರು ಈ ಯೋಜನೆಯನ್ನು ವಿರೋಧಿಸುವದಾಗಿ ಹೇಳಿದ್ದರು.
ವೀರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ಯ ಸಹ ಇಂತಹ ಯಾವದೇ ಪ್ರಸ್ತಾವನೆಯೇ ಇಲ್ಲ. ಹಾಗಿರುವಾಗ ಪ್ರತಿಭಟನೆ ನಡೆಸುವ ಅವಶ್ಯಕತೆಯೇ ಇಲ್ಲ ಎಂದು ರೈಲ್ವೆ ಯೋಜನೆ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ಸಮಯದಲ್ಲಿ ಹೇಳಿಕೆ ನೀಡಿದ್ದರು. ಆದರೂ, ಈಗ ಸರ್ವೆಕಾರ್ಯ ನಡೆಸುತ್ತಿರುವ ಮರ್ಮವೇನು ಎಂದು ಸಭೆಯಲ್ಲಿ ಪ್ರಶ್ನಿಸಲಾಯಿತು.
ಸಭೆಯಲ್ಲಿ ಯುಕೊ ಸಂಘಟ ನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ, ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ತಾಂತ್ರಿಕ ಸಲಹೆಗಾರ ಚೆಪ್ಪುಡೀರ ಶೆರಿ ಸುಬ್ಬಯ್ಯ, ಪೊನ್ನಂಪೇಟೆ ಎಪಿಎಂಸಿ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ, ಯುಕೊ ಸದಸ್ಯ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಮತ್ತಿತರರು ಹಾಜರಿದ್ದರು.