ಮಡಿಕೇರಿ, ಜೂ. 15: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ತಂದುಕೊಟ್ಟಿರುವ ಬಿಜೆಪಿ ಕಾರ್ಯ ಕರ್ತರು ಮುಂಬರುವ ಲೋಕಸಭಾ ಚುನಾವಣೆಗೆ ಸಜ್ಜಾಗುವz Àರೊಂದಿಗೆ ಕಾಂಗ್ರೆಸ್ ಮುಕ್ತ ಕೊಡಗು ಹೆಗ್ಗಳಿಕೆ ಮುಂದುವರೆಸುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಸಾಕಾರಗೊಳಿಸಲು ಬದ್ಧತೆ ತೋರುವಂತೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಪ್ರತಾಪಸಿಂಹ ಕರೆ ನೀಡಿದ್ದಾರೆ.ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಮಡಿಕೇರಿ ನಗರ ಮತ್ತು ತಾಲೂಕು ಬಿಜೆಪಿ ಕಾರ್ಯ ಕರ್ತರ ಅಭಿನಂದನಾ ಸಮಾವೇಶದಲ್ಲಿ ಅವರು ಮಾತನಾಡಿದರು.ಈ ಹಿಂದೆ ನುಡಿದಂತೆ ಕೊಡಗಿನ ಕುಶಾಲನಗರ ತನಕ ರೈಲ್ವೇ ಯೋಜನೆ, ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ತಡೆ, ಜನತೆಯ ಭಾವನೆಗೆ ವಿರುದ್ಧವಾಗಿ ತಲಚೇರಿಯಿಂದ ದಕ್ಷಿಣ ಕೊಡಗಿನ ಮೂಲಕ ರೈಲ್ವೇ ಮಾರ್ಗಕ್ಕೆ ವಿರೋಧ ನಿಲುವಿನಲ್ಲಿ ಬಿಜೆಪಿ ಬದ್ಧತೆ ಹೊಂದಿರುವದಾಗಿ ಅವರು ಪುನರುಚ್ಚರಿಸಿದರು.
ಈ ಸಂಬಂಧ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಅಪಪ್ರಚಾರ, ವೈಯಕ್ತಿಕ ಚಾರಿತ್ರ್ಯ ವಧೆಯಂತಹ ಕೃತ್ಯದಲ್ಲಿ ತೊಡಗಿರುವ ಮಂದಿಗೆ ವಿಧಾನಸಭಾ ಚುನಾವಣೆ ಸಂದರ್ಭ ಜಿಲ್ಲೆಯ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಅವರು ಮಾರ್ಮಿಕ ನುಡಿಯಾಡಿದರು. ಅಲ್ಲದೆ ದೇಶದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮುಖಾಂತರ ಜಾಗತಿಕ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆಗಳ ಪೂರ್ಣ ಸಾಕಾರಕ್ಕೆ ಮರು ಆಯ್ಕೆಯನ್ನು ಯಾವ ವಿರೋಧಿಗಳಿಂದಲೂ ತಡೆಯುವದು ಅಸಾಧ್ಯವೆಂದು ಸಂಸದರು ಸಮರ್ಥನೆ ನೀಡಿದರು.
ಸ್ವಾಭಿಮಾನ ಕೆಣಕದಿರಿ: ವೀರಾಜಪೇಟೆ ಕ್ಷೇತ್ರದ ಶಾಸಕ, ಮಾಜಿ ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ,
(ಮೊದಲ ಪುಟದಿಂದ) ಕೊಡಗಿನ ಜಮ್ಮಾಬಾಣೆ ವಿಷಯವೂ ಸೇರಿದಂತೆ ಜನತೆಯನ್ನು ದಿಕ್ಕು ತಪ್ಪಿಸುವ ಯತ್ನದಲ್ಲಿ ಕೆಲವಷ್ಟು ಅಧಿಕಾರಿಗಳು ಹಾಗೂ ಇಲ್ಲಸಲ್ಲದ ಗೊಂದಲ ಸೃಷ್ಟಿಸಿ ಬಿಜೆಪಿಯನ್ನು ದುರ್ಬಲಗೊಳಿಸಲು ಯತ್ನಿಸುವ ಮೂಲಕ, ಜಿಲ್ಲೆಯ ಜನರ ಸ್ವಾಭಿಮಾನವನ್ನು ಕೆಣಕಲಾಗುತ್ತಿದೆ ಎಂದು ಕಿಡಿಕಾರಿದರು. ಇಂತಹ ದುಸ್ಸಾಹಸ ಮುಂದುವರೆಸಿದರೆ ತಕ್ಕ ಉತ್ತರವನ್ನು ಬಿಜೆಪಿ ಹೋರಾಟದ ಮುಖಾಂತರ ನೀಡುವದಾಗಿ ಎಚ್ಚರಿಸಿದರು.
ರಾಜ್ಯದಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟ ಕಾಂಗ್ರೆಸ್ ಹಾಗೂ ವಚನಭ್ರಷ್ಟ ಜೆಡಿಎಸ್ ಅನೈತಿಕ ಮೈತ್ರಿ ಸರಕಾರದೊಂದಿಗೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಸಿದ್ಧಾಂತಕ್ಕೆ ಅಪಮಾನಿಸಿದೆ ಎಂದು ಹರಿಹಾಯ್ದ ಅವರು, ಜನ ಮತ ನೀಡಿದ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಿದ್ದು ಪ್ರಜಾಪ್ರಭುತ್ವದ ಮೇಲಿನ ದೌರ್ಜನ್ಯವೆಂದು ಬಣ್ಣಿಸಿದರು.
ಕೇಳುವವರೇ ಇಲ್ಲ: ನೆರೆಯ ಕೇರಳದ ಮಂತ್ರಿ ಮಾಕುಟ್ಟ ದುರಂತ ಸ್ಥಳಕ್ಕೆ ಭೇಟಿ ನೀಡಿದರೂ, ಕರ್ನಾಟಕ ಸರಕಾರದ ಯಾರೊಬ್ಬರೂ ಇತ್ತ ಸುಳಿಯದೆ ಈ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಕೇಳುವವರೇ ಇಲ್ಲವೆಂಬಂತಾಗಿದೆ ಎಂದು ವಿಷಾದಿಸಿದರಲ್ಲದೆ, ಎಲ್ಲೊ ದೈವಾನುಗ್ರಹ ವಂಚಿತರಾಗಿ ಬಿಜೆಪಿ ಸರಕಾರ ರಚಿಸಲು ಅಸಾಧ್ಯವಾದದ್ದು ಇಂತಹ ಪರಿಸ್ಥಿತಿಗೆ ಕಾರಣವಾಯಿತು ಎಂದು ಬೇಸರಿಸಿದರು.
ಜಾತಿ ಮೇಲಾಟಕ್ಕೆ ಪಾಠ: ಮಡಿಕೇರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಗೌಡ ಜನಾಂಗದ ಪ್ರಾಬಲ್ಯ ಕ್ಷೇತ್ರದಲ್ಲಿ ಕೊಡವ ಅಭ್ಯರ್ಥಿ ಹಾಗೂ ಕೊಡವ ಜನಾಂಗದವರು ಅಧಿಕಾರವಿರುವಲ್ಲಿ ಗೌಡ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುವ ಮೂಲಕ ಮತದಾರರು ಜಾತಿವಾದಕ್ಕೆ ಮಣೆ ಹಾಕಿಲ್ಲವೆಂದು ಅವರು ಜಾತಿವಾದಿಗಳಿಗೆ ತಿರುಗೇಟು ನೀಡಿದರು.
ಬಿಜೆಪಿ ಅಧಿಕಾರಕ್ಕೆ: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಸರಕಾರ ಶೀಘ್ರ ಪತನಗೊಂಡು ಮರಳಿ ಬಿಜೆಪಿ ಅಧಿಕಾರ ಹಿಡಿಯುವ ಮೂಲಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದ ರಂಜನ್, ಆ ಸುದಿನಕ್ಕಾಗಿ ಕಾರ್ಯಕರ್ತರು ತಾಳ್ಮೆಯಿಂದ ಕಾಯುವಂತೆ ಕರೆ ನೀಡಿದರು. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ನಮ್ಮೊಳಗೇ ಹಿತಶತ್ರುಗಳು ಹುಟ್ಟಿಕೊಂಡು ಶಾರೀರಿಕ, ಮಾನಸಿಕ, ಆರ್ಥಿಕ ಹಾಗೂ ದೈಹಿಕವಾಗಿ ಹಿಂಸೆ ಅನುಭವಿಸಿದ ವಿಚಿತ್ರ ಪ್ರಸಂಗ ತಮಗಾಯಿತು ಎಂದು ನೋವು ಹೊರಗೆಡವಿದರು. ಇಂತಹ ಎಲ್ಲ ಸನ್ನಿವೇಶಗಳನ್ನು ಬಿಜೆಪಿ ಕಾರ್ಯಕರ್ತರು ಮೆಟ್ಟಿನಿಂತು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸಂಸದರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಆದಿಸೆಯಲ್ಲಿ ಈಗಿನಿಂದಲೇ ಸಿದ್ಧರಾಗುವಂತೆ ಉಭಯ ಶಾಸಕರು ಕರೆ ನೀಡಿದರು.
ಒಗ್ಗೂಡಿ ಶ್ರಮಿಸಲು ಕರೆ: ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಬೆಂಗಳೂರು ಜನತೆ ಬುದ್ಧಿವಂತರೆನಿಸಿಕೊಂಡು ಮತದಾನದಲ್ಲಿ ಪಾಲ್ಗೊಳ್ಳದೆ ಬಿಜೆಪಿಗೆ ಅಧಿಕಾರ ತಪ್ಪಿತು ಎಂದು ಬೊಟ್ಟು ಮಾಡಿದರು. ಭವಿಷ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆ ಪರಿಪೂರ್ಣಗೊಳಿಸಲು ಲೋಕಸಭಾ ಚುನಾವಣೆಯಲ್ಲಿ ಕೊಡಗಿನ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದು, ಅದಿಕ ಮತಗಳ ಅಂತರದಿಂದ ಸಂಸದರನ್ನು ಗೆಲ್ಲಿಸಿ ಕಳುಹಿಸಬೇಕೆಂದು ಕರೆ ನೀಡಿದರು.
ಕಾರ್ಯಕರ್ತರೇ ಶಕ್ತಿ: ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಒಂದೂವರೆ ವರ್ಷ ಹಿಂದೆಯೇ ವಿಧಾನಸಭಾ ಚುನಾವಣಾ ತಯಾರಿಯಿಂದ ಕೊಡಗಿನಲ್ಲಿ ಇಬ್ಬರು ಶಾಸಕರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು, ಸ್ಥಳೀಯ ಸಂಸ್ಥೆ, ಲೋಕಸಭೆ ಚುನಾವಣೆಗೂ ಈಗಿನಿಂದಲೇ ಕಾರ್ಯಕರ್ತರು ತಯಾರಾಗುವಂತೆ ಅವರು ಸಲಹೆ ನೀಡಿದರು.
ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಉಷಾ ತೇಜಸ್ವಿ, ಸುಮಾ ಸುದೀಪ್, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ, ಪಕ್ಷದ ಮುಖಂಡರಾದ ಮನು ಮುತ್ತಪ್ಪ, ಎಂ.ಬಿ. ದೇವಯ್ಯ, ಬೆಲ್ಲುಸೋಮಯ್ಯ, ರವಿ ಬಸಪ್ಪ, ರವಿ ಕುಶಾಲಪ್ಪ, ಯಮುನ ಚಂಗಪ್ಪ, ಅನಿತಾ ಪೂವಯ್ಯ, ಬಾಲಚಂದ್ರ ಕಳಗಿ, ಕಾಳನ ರವಿ, ಡೀನ್ ಬೋಪಣ್ಣ, ಕಾಂಗೀರ ಸತೀಶ್, ಸೇರಿದಂತೆ ಇತರ ಪದಾಧಿಕಾರಿಗಳಿದ್ದರು.
ಪದಾಧಿಕಾರಿಗಳಾದ ಬಿ.ಕೆ. ಅರುಣ್ ನಿರೂಪಣೆ, ತಳೂರು ಕಿಶೋರ್ ಕುಮಾರ್ ಪ್ರಸ್ತಾವಿಕ, ಮಹೇಶ್ ಜೈನಿ ಸ್ವಾಗತ, ಕೋಡಿರ ಪ್ರಸನ್ನ ವಂದನಾರ್ಪಣೆ ನೆರವೇರಿಸಿದರು.