ಮಡಿಕೇರಿ, ಜೂ. 15: ಸರಕಾರಿ ಶಾಲೆ ಎನ್ನುವ ಕೀಳರಿಮೆ ಬಿಟ್ಟು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುವ ಮೂಲಕ ಗುರು ಮುಟ್ಟಬೇಕು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಚಂದ್ರಶೇಖರ್ ಪಾಲಕರಿಗೆ ಸಲಹೆ ನೀಡಿದರು. ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕ ಸಾಧನೆಯಲ್ಲಿ ಸರಕಾರಿ ಶಾಲೆಗಳು ಕೂಡ ಖಾಸಗಿ ಶಾಲೆಗಳಷ್ಟೇ ಮುಂದಿದ್ದು, ಶಿಕ್ಷಕರನ್ನು ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.

ಪ್ರಗತಿಪರ ರೈತ ತೇಜಸ್ ನಾಣಯ್ಯ ಮಾತನಾಡಿ, ಶಿಕ್ಷಕರ ಪರಿಶ್ರಮವೇ ಸರಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರಲು ಕಾರಣವಾಗಿದ್ದು, ಅಂತಹ ಶಿಕ್ಷಕರನ್ನು ದಲಿತ ಸಂಘರ್ಷ ಸಮಿತಿ ಕಳೆದ ಹಲವು ವರ್ಷಗಳಿಂದ ಗುರುತಿಸಿ ಸನ್ಮಾನಿಸುತ್ತಿರುವದು ಇತರ ಸಂಘ-ಸಂಸ್ಥೆಗಳಲ್ಲಿ ಮಾದರಿಯಾಗಿದೆ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಹಾಕತ್ತೂರು ಸರಕಾರಿ ಪ್ರೌಢಶಾಲೆ ಶೇ. 98 ರಷ್ಟು ಸಾಧನೆ ಮಾಡಿದ್ದು, ಈ ಸಾಧನೆಗೆ ಕಾರಣಕರ್ತರಾದ 11 ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಮಿತಿ ತಾಲೂಕು ಸಂಚಾಲಕಿ ಎ.ಪಿ. ದೀಪಕ್, ಶಾಲೆಯ ಮುಖ್ಯೋಪಾಧ್ಯಾಯ ರಾಮಚಂದ್ರ, ಪ್ರಮುಖರಾದ ಪೈಕೆರ ಮನೋಜ್, ದಿನೇಶ್ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಪಾಲಕರು ಹಾಗೂ ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.