ಮಡಿಕೇರಿ, ಜೂ. 16: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಭೂ ಕುಸಿತ ಉಂಟಾಗಿ ಕರ್ನಾಟಕ - ಕೇರಳ ನಡುವೆ ಸಂಪರ್ಕ ಕಡಿತಗೊಂಡಿರುವ ಮಾಕುಟ್ಟ ಹೆದ್ದಾರಿಗೆ ಇಂದು ಜಿಲ್ಲೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ಉಪವಿಭಾಗಾಧಿಕಾರಿ ಆರ್.ಕೆ. ಕೋನಾರೆಡ್ಡಿ ಸೇರಿದಂತೆ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ ಹಾಗೂ ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.ಪೆರುಂಬಾಡಿ ಗೇಟ್‍ನಿಂದ ಮಾಕುಟ್ಟ ಗಡಿ ಕೂಟುಹೊಳೆ ತನಕವೂ ಜಿಲ್ಲಾಧಿಕಾರಿ ತಂಡ ಪರಿಶೀಲಿಸಿ ಅತಿವೃಷ್ಟಿ ಸಂಬಂಧ ಮಾಹಿತಿ ಸಂಗ್ರಹಿಸಿದರು. ತಾ. 18ರಂದು (ನಾಳೆ) ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಈ ಪ್ರದೇಶಕ್ಕೆ ಭೇಟಿ ನೀಡಲಿರುವ ಸಂಬಂಧ ವಾಸ್ತವಾಂಸ ತಿಳಿಸಲು ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.ಮಾಕುಟ್ಟ ಮಾತ್ರವಲ್ಲದೆ, ತಿತಿಮತಿ ಹೆದ್ದಾರಿ ಕುಸಿತದಿಂದ ಸಂಚಾರಕ್ಕೆ ತೊಡಕಾಗಿರುವ (ಮೊದಲ ಪುಟದಿಂದ) ಬಗ್ಗೆಯೂ ಪರಿಶೀಲಿಸಿದ ಜಿಲ್ಲಾಧಿಕಾರಿ ಸದ್ಯಕ್ಕೆ ಈ ಮಾರ್ಗದಲ್ಲಿ ಬಸ್ ಸಹಿತ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ನೀಡದಂತೆ ಸೂಚಿಸಿದ್ದು, ಮುಂದೆ ಅಪಾಯ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚಿಸಿದ್ದಾರೆ.ಸೇತುವೆ ಪರಿಶೀಲನೆ. ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ತಿತಿಮತಿಗೆ ಭೇಟಿ ನೀಡಿ ಮೈಸೂರು - ತಿತಿಮತಿ ರಾಜ್ಯ ಹೆದ್ದಾರಿಯ ಸೇತುವೆ ನಿರ್ಮಾಣದ ಕಾಮಗಾರಿ ಪರಿಶೀಲನೆ ನಡೆಸಿದರು.

ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ತಾತ್ಕಾಲಿಕ ಮಾರ್ಗ ಕುಸಿದ ಪರಿಣಾಮ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಜಿಲ್ಲಾಧಿಕಾರಿ ಶ್ರೀವಿದ್ಯಾ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಇನ್ನೂ ಹದಿನೈದು ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವದಾಗಿ ಗುತ್ತಿಗೆದಾರರು ಭರವಸೆ ನೀಡಿದರು. ತಹಶೀಲ್ದಾರ್ ಗೋವಿಂದರಾಜ್ ಮೊದಲಾದವರು ಹಾಜರಿದ್ದರು.