ಸೋಮವಾರಪೇಟೆ, ಜೂ. 16: ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ಕಟ್ಟಡದಲ್ಲಿ ಕರ್ನಾಟಕ ಕಾರ್ಮಿಕ ಹೋರಾಟ ಸಂಘದ ನೂತನ ಕಚೇರಿಯನ್ನು ತೆರೆಯಲಾಗಿದ್ದು, ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರಪ್ರಸಾದ್ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕ ವರ್ಗಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘ ಕಾರ್ಯಚಟುವಟಿಕೆ ನಡೆಸಬೇಕಿದೆ. ಸರ್ಕಾರದ ಸೌಲಭ್ಯಗಳ ಬಗ್ಗೆ ಕಾರ್ಮಿಕರಲ್ಲಿ ಅರಿವು ಮೂಡಿಸಿ, ಸವಲತ್ತುಗಳನ್ನು ಒದಗಿಸಿಕೊಡುವ ಮಹತ್ತರ ಜವಾಬ್ದಾರಿ ಸಂಘದ ಮೇಲಿದೆ ಎಂದರು.
ಕಾರ್ಮಿಕರ ಬಗ್ಗೆ ಸರ್ಕಾರಗಳು ಹೆಚ್ಚಿನ ಗಮನ ಹರಿಸುತ್ತಿಲ್ಲ. ದಿನನಿತ್ಯ ಕಾರ್ಮಿಕರ ಶೋಷಣೆಗಳು ನಡೆಯುತ್ತಿದ್ದು, ಇವುಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಉಮೇಶ್, ರಾಜ್ಯ ರೈತ ಸಂಘದ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ ಮಾತನಾಡಿದರು. ಈ ಸಂದರ್ಭ ಸಂಘದ ತಾಲೂಕು ಅಧ್ಯಕ್ಷ ಡಿ.ಬಿ. ಮಂಜುನಾಥ್, ಉಪಾಧ್ಯಕ್ಷ ಬಬಿನ್ ರೈ, ನಗರಾಧ್ಯಕ್ಷ ವಿ.ಕೆ. ಮಂಜುನಾಥ್, ಪ್ರಮುಖರಾದ ಹೊನ್ನಪ್ಪ, ಪ್ರದೀಪ್, ಸುನಿಲ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪಲ್ಲವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.