ಮಡಿಕೇರಿ, ಜೂ. 16: ಶ್ರೀಮಂಗಲ ಸನಿಹದ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಸುಮಾರು ಐದಾರು ಆನೆಗಳಿರುವ ಹಿಂಡೊಂದು ಬೀಡು ಬಿಟ್ಟಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಸಿವೆ. ಮರಿ ಸಹಿತವಾಗಿ ಇರುವ ಆನೆಗಳು ತೋಟ ಗದ್ದೆಗಳಲ್ಲಿ ದಾಂಧಲೆ ನಡೆಸುತ್ತಿದ್ದು, ಕೃಷಿ ಫಸಲುಗಳು ಹಾನಿಗೀಡಾಗಿವೆ. ನಿನ್ನೆ ಹಾಡಹಗಲೇ ಈ ಹಿಂಡು ಅಲ್ಲಿನ ಕೆಲವರನ್ನು ಬೆನ್ನಟ್ಟಿದ್ದು, ಐದಾರು ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಅಲ್ಲಿನ ಗದ್ದೆ - ತೋಟಗಳಲ್ಲಿ ಹಾಡಹಗಲೇ ದಾಂಧಲೆ ನಡೆಸುತ್ತಿದ್ದ ಆನೆಗಳನ್ನು ಕಂಡ ಇವರು ಆನೆಗಳನ್ನು ಕಾಡಿಗಟ್ಟಲು ಯತ್ನಿಸಿದ್ದಾರೆ. ಈ ಸಂದರ್ಭ ಮರಿ ಸಹಿತವಾಗಿ ಇದ್ದ ಆನೆ ಇವರನ್ನು ಸುಮಾರು 300 ಮೀಟರ್‍ಗಳಷ್ಟು ದೂರ ಬೆರೆಸಿದ್ದು, ಇವರು ಓಡಿ ತಪ್ಪಿಸಿಕೊಂಡಿದ್ದಾರೆ. ಒಂದಿಬ್ಬರು ಮರ ಏರಿ ತಪ್ಪಿಸಿಕೊಂಡಿದ್ದಾರೆ. ಇತರರು ಎದ್ದು, ಬಿದ್ದು ಓಡಬೇಕಾಯಿತೆಂದು ಧಾಳಿಗೆ ಸಿಲುಕಿದವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಗ್ರಾಮಸ್ಥರಾದ ರಂಜು ಕರುಂಬಯ್ಯ, ಕೃಷ್ಣ, ನಟೇಶ, ಕಂಬಣ್ಣ ಮತ್ತಿತರರು ಧಾಳಿಯಿಂದ ಬಚಾವಾಗಿದ್ದಾರೆ. ಈ ಸಂದರ್ಭ ಮರ ಏರಲು ಯತ್ನಿಸಿದವರ ಬೆನ್ನಿಗೆ ಭಾಗಕ್ಕೆ ಸಣ್ಣಪುಟ್ಟ ಗಾಯವುಂಟಾಗಿದೆ. ಸ್ಥಳಕ್ಕೆ ಸಂಜೆ ವೇಳೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಅಟ್ಟುವ ಯತ್ನ ನಡೆಸಿದರೂ, ಮಳೆ ಇದಕ್ಕೆ ಅಡ್ಡಿಯಾಗಿತ್ತು. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.