ಗೋಣಿಕೊಪ್ಪ ವರದಿ, ಜೂ. 16 :ಶನಿವಾರದಿಂದ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂಬ ಉತ್ಸಾಹದಲ್ಲಿದ್ದ ಇಂಜಿನಿಯರ್ ವಿಭಾಗಕ್ಕೆ ಶುಕ್ರವಾರ ಸುರಿದ ಮಳೆಯಿಂದಾಗಿ ತೊಡಕುಂಟಾಗಿದ್ದು, ಕಾಮಗಾರಿ ಮುಗಿಯದ ಕಾರಣ ಭಾನುವಾರ ಸಂಜೆ ಅಥವಾ ಸೋಮವಾರ ಬೆಳಿಗ್ಗೆಯಿಂದ ಅವಕಾಶ ನೀಡಲಾಗುವದು ಎಂದು ರಾಷ್ಟ್ರೀಯ ಹೆದ್ದಾರಿ ಸಕಲೇಶಪುರ ಉಪವಿಭಾಗದ ಇಂಜಿನಿಯರ್ ಹಾಲಪ್ಪ ಸ್ಪಷ್ಟ ಪಡಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿರುವ ಅವರು, ಗೋಣಿಕೊಪ್ಪ - ಮೈಸೂರು ಹೆದ್ದಾರಿಯಲ್ಲಿನ ತಿತಿಮತಿಯಲ್ಲಿನ ಸೇತುವೆ ನೀರಿನ ಸೆಳೆತಕ್ಕೆ ಸಿಲುಕಿ ಲಘು ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ. ತಾತ್ಕಾಲಿಕ ಸೇತುವೆಯಲ್ಲಿ ಅಗಲೀಕರಣ ಕಲ್ಲಿನಿಂದ ನಿರ್ಮಿಸಲಾಗುತ್ತಿದೆ. ನಂತರ ವೆಟ್‍ಮಿಕ್ಸ್ ಹಾಕಿ ಬಸ್‍ಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುವದು. ಶನಿವಾರ ಸಂಜೆ ಕಾಮಗಾರಿ ಮುಗಿದಿದ್ದು, ಒಂದು ದಿನದಷ್ಟು ಕಾಲ ಗಟ್ಟಿಯಾಗಲು ಸಮಯ ನೀಡಲಾಗುತ್ತಿದೆ. ಇದರಂತೆ ಭಾನುವಾರ ಸಂಜೆ ಅಥವಾ ಸೋಮವಾರ ಬೆಳಗ್ಗೆಯಿಂದ ಬಸ್ ಹಾಗೂ ಭಾರೀ ವಾಹನಗಳು ಓಡಾಡಲು ಅವಕಾಶ ನೀಡಲಾಗುವದು. ಶುಕ್ರವಾರ ಮಳೆಯಿಂದ ಕಾಮಗಾರಿ ಮುಗಿದಿರಲಿಲ್ಲ ಎಂದು ತಿಳಿಸಿದ್ದಾರೆ.

ಸೇತುವೆ ವಿಸ್ತರಣೆಗಾಗಿ ತಡೆಗೋಡೆ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದೆ. ನಂತರ ಕಲ್ಲುಪುಡಿ ಹಾಕಿ ಅಗಲೀಕರಣ ಮಾಡಿ ಬಸ್ ಸಂಚರಿಸಲು ಅವಕಾಶ ಮಾಡಿಕೊಡಲು ಕಾಮಗಾರಿ ನಡೆಯುತ್ತಿದೆ.