ಮಡಿಕೇರಿ, ಜೂ. 16: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಡಿ ಕಾರ್ಯ ನಿರ್ವಹಿಸುತ್ತಿರುವ ಗೆಳತಿ ವಿಶೇಷ ಚಿಕಿತ್ಸಾ ಘಟಕ ಹಾಗೂ ಸ್ಥೈರ್ಯ ನಿಧಿ ಯೋಜನೆಯ ಜಿಲ್ಲಾ ಸಮನ್ವಯ ಸಮಿತಿ ಸಭೆ ಇತ್ತೀಚೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ದೌರ್ಜನ್ಯ ಪ್ರಕರಣಗಳು ದಾಖಲಾದ ಸಂದರ್ಭ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ನೊಂದ ಮಹಿಳೆ ಮತ್ತು ಮಕ್ಕಳಿಗೆ ನೆರವು ನೀಡುವಂತೆ ತಿಳಿಸಿದರು. ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಮಕ್ಕಳಿಗೆ ನೆರವು ನೀಡುವ ಸಲುವಾಗಿ ಜಿಲ್ಲೆಯಲ್ಲಿ ಒನ್ ಸ್ಟಾಪ್ ಸೆಂಟರ್ ಸ್ಥಾಪಿಸುವ ಕುರಿತು ಸೂಕ್ತ ಕ್ರಮವಹಿಸುವಂತೆ ಜಿಲ್ಲಾ ಸರ್ಜನ್ ಹಾಗೂ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅವರಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ಅಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಒತ್ತು ನೀಡಬೇಕಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿನ ಹಕ್ಕುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವದು ಅಗತ್ಯ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ನೆರವು, ಪೊಲೀಸ್ ನೆರವು, ಕಾನೂನು ನೆರವು, ಆಪ್ತ ಸಮಾಲೋಚನೆ ಮುಂತಾದ ಸೌಲಭ್ಯಗಳನ್ನು ಒಂದೆ ಸೂರಿನಡಿ ಒದಗಿಸುವ ಸಲುವಾಗಿ ‘ಗೆಳತಿ ವಿಶೇಷ ಚಿಕಿತ್ಸಾ ಘಟಕ’ ಪ್ರಾರಂಭವಾಗಿದ್ದು ಪ್ರಸ್ತುತ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಮಡಿಕೇರಿಯ ಗರ್ಭಿಣಿ ಮತ್ತು ಮಕ್ಕಳ ವಿಭಾಗದ ವಿಶೇಷ ಮಹಿಳಾ ವಿಭಾಗ ದಲ್ಲಿ ಕಾರ್ಯನಿರ್ವಹಿಸುತ್ತಿರುವದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ತಿಳಿಸಿದರು.
ಸದರಿ ಘಟಕವು ಪ್ರಾರಂಭದಿಂದ ಇದುವರೆಗೆ ಒಟ್ಟು 139 ವಿವಿಧ ರೀತಿಯ ಪ್ರಕರಣಗಳು ದಾಖಲಾಗಿ ರುತ್ತದೆ. ಅವುಗಳಲ್ಲಿ 9 ಪ್ರಕರಣಗಳ ಅಪರಾಧಿಗಳಿಗೆ ಶಿಕ್ಷೆಯಾಗಿದ್ದು, 52 ಪ್ರಕರಣಗಳು ಇತ್ಯರ್ಥವಾಗಿದ್ದು, ಉಳಿದ 78 ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ದಾಖಲಾದ ಪ್ರಕರಣಗಳಲ್ಲಿ 16 ಮಕ್ಕಳಿಗೆ ಸ್ಥಳೀಯ ಬಾಲಕಿಯರ ಬಾಲಮಂದಿರಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ತಾ. 1.7.2015 ರ ನಂತರ ಘಟಕದಲ್ಲಿ ದಾಖಲಾಗಿದ್ದ 17 ಸಂತ್ರಸ್ಥ ಮಹಿಳೆಯರಿಗೆ ಸ್ಥೈರ್ಯ ನಿಧಿ ಯೋಜನೆಯಡಿ ತಲಾ ರೂ. 25 ಸಾವಿರ ತುರ್ತು ಪರಿಹಾರ ಹಾಗೂ 1 ಮಹಿಳೆಯ ಕುಟುಂಬಕ್ಕೆ ಮರಣ ಪರಿಹಾರ ರೂ. 1 ಲಕ್ಷ ಮೊತ್ತವನ್ನು ಜಿಲ್ಲಾ ಸಮಿತಿಯ ಅನುಮೋದನೆ ಪಡೆದು ಪಾವತಿಸಲಾಗಿರುತ್ತದೆಂದು ಹಾಗೂ ಸದರಿ ಸಭೆಯಲ್ಲಿ ಮೂರು ಸಂತ್ರಸ್ಥ ಮಹಿಳೆಯರಿಗೆ ಸ್ಥೈರ್ಯ ನಿಧಿ ಯೋಜನೆಯಡಿ ಆರ್ಥಿಕ ಪರಿಹಾರ ನೀಡಲು ಜಿಲ್ಲಾ ಸಮಿತಿ ಅನುಮೋದನೆ ನೀಡಿರುತ್ತದೆಂದು ಮಹಿಳಾ ಅಭಿವೃದ್ಧಿ ಅಧಿಕಾರಿ ಮಮ್ತಾಜ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್, ಜಿಲ್ಲಾ ಸರ್ಜನ್ ಡಾ. ಜಗದೀಶ್, ಮಹಿಳೋದಯ ಮೇಲ್ವಿಚಾರಕರು, ಕಾನೂನು ಸೇವಾ ಪ್ರಾಧಿಕಾರದ ಪ್ರತಿನಿಧಿಗಳು, ವೀರಾಜಪೇಟೆ ಹಾಗೂ ಸೋಮವಾರ ಪೇಟೆ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಮತ್ತು ಗೆಳತಿ ವಿಶೇಷ ಚಿಕಿತ್ಸಾ ಘಟಕದ ಸಿಬ್ಬಂದಿಗಳು ಹಾಗೂ ಇತರರು ಮಾಹಿತಿಯನ್ನು ನೀಡಿದರು.