ಮಡಿಕೇರಿ, ಜೂ. 16: ಪ್ರಸಕ್ತ ಮಳೆ ಯಿಂದ ಕಾಫಿ ತೋಟಕ್ಕೆ ಹಾನಿ ಯಾಗಿರುವ ಕುರಿತು ಸೂಕ್ತ ಪರಿಹಾರ ನೀಡಲು ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆ.ಜಿ.ಎಫ್.) ಆಗ್ರಹಿಸಿದೆ.
ಕಾಫಿ ಬೆಳೆಯುವ ಮಲೆನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಕಳೆದ 8-10 ದಿನಗಳಿಂದ ಮುಂಗಾರು ಮಳೆಯು ಎಡಬಿಡದೇ ಸುರಿಯುತ್ತಿರುವದಿಂದ ಬಿರುಗಾಳಿ ಸಹಿತ ಭಾರೀ ಮಳೆಗೆ ಇಲ್ಲಿನ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಾಫಿ ತೋಟಗಳಲ್ಲಿ ಬೃಹತ್ ಗಾತ್ರದ ಮರಗಳು ನೆಲಕ್ಕುರುಳಿವೆ. ಇದಲ್ಲದೇ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ವ್ಯತ್ಯಯದಿಂದ ಈ ಭಾಗ ಕತ್ತಲೆಯ ಖಂಡವಾಗಿದೆ. ರಸ್ತೆಗಳಲ್ಲಿ ಭಾರೀ ಗಾತ್ರದ ಮರಗಳು ಬಿದ್ದಿರುವದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಪೂರ್ವಿಕರು ಅಂದಾಜಿಸಿರುವಂತೆ 1960ನೇ ಇಸವಿಯಲ್ಲಿ ಸುರಿದ ಭಾರೀ ಮಳೆ 2018ನೇ ಮುಂಗಾರಿನಲ್ಲಿಯೇ ಸುರಿದಿರುವದು ಮುಂದಿನ ದಿನದ ಭಾರೀ ಹಾನಿಗೆ ಒತ್ತು ನೀಡಿದಂತಾಗಿದೆ ಎಂದು ಅಂದಾಜಿಸಲಾಗಿದೆ.
ಕಾಫಿ ತೋಟಗಳಲ್ಲಿ ಲೆಕ್ಕವಿಲ್ಲದಷ್ಟು ಮರಗಳು ಬಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಗಿಡಗಳು ನಾಶವಾಗಿವೆ. ಬಿರುಗಾಳಿ ಸಹಿತ ಭಾರೀ ಮಳೆಯಿಂದ ಕಾಫಿ ಗಿಡಗಳು ಬುಡ ಸಮೇತ ಕಿತ್ತುಹೋಗಿವೆ. ಕೆಲವೆಡೆ ತೋಟಗಳಲ್ಲಿ ಭೂಕುಸಿತಗಳು ಸಂಭವಿಸಿವೆ.
ಮುಂದಿನ ಸಾಲಿನ ಕಾಫಿ ಪಸಲಿನ ಮೇಲೂ ಎಡಬಿಡದೇ ಸುರಿಯುತ್ತಿರುವ ಈ ಮಳೆಯು ಹೆಚ್ಚಿನ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಿದೆ. ಜೊತೆಗೆ ಕಾಳುಮೆಣಸು, ಬಾಳೆ, ಅಡಿಕೆ, ಏಲಕ್ಕಿ, ತೆಂಗು ಬೆಳೆಗಳೂ ಸಹಾ ನಾಶವಾಗಿದೆ.
ಆದ್ದರಿಂದ ಸರ್ಕಾರ ಜಿಲ್ಲಾಡಳಿತ, ತಾಲೂಕು ಆಡಳಿತಗಳು ಕೂಡಲೇ ಕಾರ್ಯಮಗ್ನರಾಗಿ ಆಯಾ ಬೆಳೆಗನುಸಾರವಾಗಿ, ನಷ್ಟದ ಬಗ್ಗೆ, ಸಂಬಂಧಪಟ್ಟ ಆಯಾ ಇಲಾಖೆಗಳು ಸಮೀಕ್ಷೆ ನಡೆಸಿ, ವರದಿ ತಯಾರಿಸಿ, ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸುತ್ತದೆ. ಜೊತೆಗೆ ಕಾಫಿ ಮಂಡಳಿಯು ಕೂಡಲೇ ಅಧಿಕಾರಿಗಳನ್ನು ತೋಟಗಳಿಗೆ ಭೇಟಿ ನೀಡಿ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಿ, ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡುವಲ್ಲಿ ಮುಂದಾಗಬೇಕು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯು.ಎಂ. ತೀರ್ಥಮಲ್ಲೇಶ್ ಆಗ್ರಹಿಸಿದ್ದಾರೆ.