ಆಲೂರು-ಸಿದ್ದಾಪುರ, ಜೂ. 16: ಆಲೂರು-ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪಿ.ಎಸ್. ಲೀಲ ಕುಮಾರ್ ಸಂಘದ 2016-17ನೇ ಸಾಲಿನ ವರದಿ ಹಾಗೂ 2017-18ನೇ ಸಾಲಿನ ಲೆಕ್ಕ ಪರಿಶೋಧ ವರದಿ ಮಂಡಿಸಿದರು. ಆಲೂರು-ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2018ನೇ ಸಾಲಿನಲ್ಲಿ ಒಟ್ಟು 2968 ಸದಸ್ಯರಿದ್ದು, ಒಟ್ಟು 1 ಕೋಟಿ 51 ಲಕ್ಷದ 156 ರೂ. ಪಾಲು ಹಣ ಇದೆ ಎಂದರು. 2017-18ನೇ ಸಾಲಿನಲ್ಲಿ 1203 ಮಂದಿ ಯಶಸ್ವಿನಿ ಆರೋಗ್ಯ ವಿಮೆ ನೋಂದಾವಣೆ ಮಾಡಿಸಿಕೊಂಡಿದ್ದು, ಸಂಘದ ವ್ಯಾಪ್ತಿಯಲ್ಲಿ ಒಟ್ಟು 90 ಸ್ವ-ಸಹಾಯ ಗುಂಪುಗಳಿದ್ದು ಈ ಪೈಕಿ 22 ಗುಂಪುಗಳಿಗೆ 38 ಲಕ್ಷದ 57 ಸಾವಿರದ 960 ರೂ. ಸಾಲ ನೀಡಲಾಗಿದೆ ಎಂದರು.
ಸಂಘವು ಸಹಕಾರಿಗಳಿಗೆ ಕೃಷಿ ಸಾಲ ವಿತರಿಸಿರುವದರ ಜೊತೆಯಲ್ಲಿ 2017-18ನೇ ಸಾಲಿನಲ್ಲಿ 1 ಕೋಟಿ 5 ಲಕ್ಷದ 7 ಸಾವಿರದ 377 ರೂ. ವ್ಯಾಪಾರ ವಹಿವಾಟು ನಡೆಸಿ 5 ಲಕ್ಷದ 34 ಸಾವಿರ ರೂ. ಲಾಭಗಳಿಸಿದೆ, ಸಂಘವು 2017-18ನೇ ಸಾಲಿನಲ್ಲಿ ಒಟ್ಟು 19 ಲಕ್ಷದ 46 ಸಾವಿರದ 201 ರೂ. ನಿವ್ವಳ ಲಾಭಗಳಿಸಿದೆ ಎಂದರು.
ಮಹಾಸಭೆಯಲ್ಲಿ ನಡೆದ ಚರ್ಚೆ: ಸಂಘದ ಸದಸ್ಯರುಗಳು ವರ್ಷಕೊಮ್ಮೆ ನಡೆಯುವ ಮಹಾಸಭೆಗೆ ಹಾಜರಾಗುವದಿಲ್ಲ, ಕೇವಲ ಸದಸ್ಯರ ಡಿವಿಡೆಂಡ್ ಹಣವನ್ನು ಪಡೆದು ಮನೆಗೆ ಹೋಗುತ್ತಾರೆ. ಇದರಿಂದ ಸಂಘದ ಸದಸ್ಯರಿಗೆ ಸಂಘದ ಲಾಭ-ನಷ್ಟ, ಸರಕಾರದಿಂದ ಸಿಗುವ ಸಾಲ ಸವಲತ್ತು ಮುಂತಾದವುಗಳ ಬಗ್ಗೆ ಮಾಹಿತಿ ಪಡೆಯುವದಿಲ್ಲ. ಈ ಬಗ್ಗೆ ಸಂಘದ ಆಡಳಿತ ಮಂಡಳಿ ಮಹಾ ಸಭೆ ಮುಗಿದ ನಂತರ ಡಿವಿಡೆಂಡ್ ಹಣ ವಿತರಿಸಬೇಕೆಂದು ಹಿರಿಯ ಸಹಕಾರಿ ಸಿ.ಕೆ. ಚಂದ್ರಶೇಖರ್, ಹೆಚ್.ಎಸ್. ಪ್ರೇಮ್‍ನಾಥ್ ಹಾಗೂ ಎಂ.ಎನ್. ಮಹಾಂತಪ್ಪ ಅವರುಗಳು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಂಘದ ಸಿ.ಒ. ಲೀಲಕುಮಾರ್, ಇನ್ನು ಮುಂದೆ ಸರಕಾರ ಮತ್ತು ಸಹಕಾರಿ ಇಲಾಖೆಯ ಸುತ್ತೋಲೆಯಂತೆ ಸಂಘದ ಸದಸ್ಯರು ತಪ್ಪದೆ ವಾರ್ಷಿಕ ಮಹಾಸಭೆಗೆ ಬಂದು ಸಹಿ ಮಾಡಿದ ನಂತರ ಡಿವಿಡೆಂಡ್ ಹಣ ಪಡೆದುಕೊಳ್ಳುವದು, ಮಹಾಸಭೆಗೆ ಹಾಜರಾಗದ ಸಂಘದ ಸದಸ್ಯರಿಗೆ ಸಹಕಾರ ಸಂಘದ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ಕೊಡುವದಿಲ್ಲ. ಇದರ ಜೊತೆಯಲ್ಲಿ ಸಂಘದ ಸದಸ್ಯರು ತಮ್ಮ ಖಾತೆ ಮೂಲಕ ಕನಿಷ್ಟ 5 ಸಾವಿರ ರೂ. ನಷ್ಟು ವ್ಯವಹಾರ ನಡೆಸಬೇಕಾಗುತ್ತದೆ. ಕೇವಲ ಸಂಘದ ಸದಸ್ಯರಾಗಿದ್ದು ಸಂಘದ ಮಹಾಸಭೆಗೆ ಬಾರದ ಮತ್ತು ವ್ಯವಹಾರ ನಡೆಸದ ಸದಸ್ಯರಿಗೆ ಇದು ಅನ್ವಯವಾಗುತ್ತದೆ ಎಂದರು. ಸಹಕಾರಿ ಸದಸ್ಯರು ಸಂಘದಲ್ಲಿ ಕೃಷಿ ಸಾಲ ಮಾಡುವ ಸಂದರ್ಭ ಬೆಳೆ ವಿಮೆ ಮಾಡಿಸುತ್ತಾರೆ. ಆದರೆ ಇಲ್ಲಿಯ ತನಕ ಬೆಳೆ ವಿಮೆ ರೈತರಿಗೆ ವಿತರಣೆಯಾಗಿಲ್ಲ. ಇದನ್ನು ಕೈಬಿಡುವಂತೆ ಸಹಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಡಿಸಿಸಿ ಬ್ಯಾಂಕ್ ಪರ ಮೇಲ್ವಿಚಾರಕ ಎಸ್.ಡಿ. ಶಶಿಕುಮಾರ್, ಸರಕಾರದ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಇನ್ನು ಮುಂದೆ ಸಂಘದ ಸದಸ್ಯರು ಸಂಘದಲ್ಲಿ ಪ್ರತಿಯೊಂದು ಬೆಳೆಗೆ ವಿಮೆ ಮಾಡಿಸಬೇಕು, ಅದರಂತೆ ವಿಮೆ ಮಾಡಿಸದ ಸದಸ್ಯರ ಬೆಳೆ ನಷ್ಟವಾಗುವ ಸಂದರ್ಭದಲ್ಲಿ ವಿಮೆ ಸಂಸ್ಥೆಯಿಂದ ಪರಿಹಾರದ ವಿಮೆ ಹಣ ಸಿಗುತ್ತದೆ. ಈ ನಿಟ್ಟಿನಲ್ಲಿ ಸದಸ್ಯರು ವಿಮೆ ಮಾಡಿಸುವಾಗ ಪಹಣಿ ಪತ್ರದ ಜೊತೆಯಲ್ಲಿ ಆಧಾರ್ ಕಾರ್ಡ್ ಇವುಗಳನ್ನು ಸಂಘಕ್ಕೆ ಕೊಟ್ಟು ಬೆಳೆ ವಿಮೆ ಮಾಡಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಸದಸ್ಯರುಗಳ ಪಾಲು ಹಣವನ್ನು ಮುಂದಿನ ಸಾಲಿಗೆ 2 ಕೋಟಿ ರೂ.ಗೆ ಹೆಚ್ಚಿಸುವಂತೆ ನಿರ್ಣಯಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಸಂಘದ ಪ್ರಗತಿಗೆ ಸಹಕಾರಿ ಸದಸ್ಯರುಗಳು ಕೈಜೋಡಿಸಬೇಕು. ಪ್ರಸ್ತುತ ಸಾಲಿನಲ್ಲಿ ಸಂಘವು 19 ಲಕ್ಷ ರೂ. ಗಿಂತ ಹೆಚ್ಚಿನ ನಿವ್ವಳ ಲಾಭಗಳಿಸಿದೆ ಎಂದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎ.ಜಿ. ವಿಜಯ್, ನಿರ್ದೇಶಕರಾದ ಡಿ.ಎಂ. ಸುಬ್ಬಯ್ಯ, ಎಸ್.ಜೆ. ಪ್ರಸನ್ನಕುಮಾರ್, ಸಿ.ಕೆ. ದೇವಯ್ಯ, ಕೆ.ಜಿ. ಹೊನ್ನಪ್ಪ, ಜಿ.ಬಿ. ಸಿದ್ದಲಿಂಗಪ್ಪ, ಹೆಚ್. ಪಾಪಯ್ಯ, ಎಂ.ಕೆ. ಲೀಲಾ, ಪಿ.ಕೆ. ರಮಾವತಿ, ಆಂತರಿಕ ಲೆಕ್ಕ ಪರಿಶೋಧಕ ಬಿ.ಎಸ್. ಬಸವಣ್ಣ, ಕೆ.ಡಿ. ಚಂದ್ರಮತಿ ಮುಂತಾದವರು ಇದ್ದರು.