ಮಡಿಕೇರಿ, ಜೂ. 16: ಕೊಡಗು ಜಿಲ್ಲೆ ಪ್ರಸಕ್ತ ವರ್ಷ ಭಾರೀ ವರ್ಷಧಾರೆಯಾಗಿದ್ದು, ಈ ತನಕ ಸುರಿದಿರುವ ಮಳೆಯಿಂದ ಜಿಲ್ಲೆ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಬಿರು ಮಳೆಯಿಂದಾಗಿ ವ್ಯಾಪಕ ನಷ್ಟ ಸಂಭವಿಸಿದ್ದು, ನಷ್ಟದ ಪ್ರಮಾಣ ಇನ್ನೂ ಅಧಿಕಗೊಳ್ಳುತ್ತಲೇ ಇದೆ. ಪ್ರಸ್ತುತ ಒಂದೆರಡು ದಿನದಿಂದ ಮಳೆ ಇಳಿಮುಖವಾಗಿದ್ದರೂ ಜಲಾನಯನ ಪ್ರದೇಶಗಳಲ್ಲಿ ನೀರಿನ ಹರಿವು ಇನ್ನೂ ಹೆಚ್ಚಾಗಿಯೇ ಮುಂದುವರಿಯುತ್ತಿವೆ. ಜಿಲ್ಲೆಯಾದ್ಯಂತ ನದಿ ತೊರೆಗಳು ಈಗಾಗಲೇ ತುಂಬಿ ಹರಿದಿವೆ. ಇದರೊಂದಿಗೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷ ಜೂನ್ 16ರವರೆಗೆ ಸರಾಸರಿ 24.32 ಇಂಚಿನಷ್ಟು ಅಧಿಕ ಮಳೆ ಸುರಿದಿದೆ.

ಕಳೆದ ವರ್ಷ ಜನವರಿಯಿಂದ ಈ ಅವಧಿಯವರೆಗೆ ಕೇವಲ 18.23 ಇಂಚಿನಷ್ಟು ಮಾತ್ರ ಸರಾಸರಿ ಮಳೆಯಾಗಿತ್ತು. ಈ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಎರಡು ಪಟ್ಟಿಗಿಂತ ಹೆಚ್ಚಾಗಿರುವದು ಕಂಡು ಬಂದಿದೆ. ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 98 ಸೆಂಟ್ ಮಳೆಯಾಗಿದೆ. ಕಳೆದ ವರ್ಷ ಈ ದಿನದಂದು ಕೇವಲ 0.20 ಸೆಂಟ್‍ನಷ್ಟು ಮಾತ್ರ ಮಳೆ ಬಿದ್ದಿತ್ತು. (ಮೊದಲ ಪುಟದಿಂದ) ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ 1.38 ಇಂಚು, ವೀರಾಜಪೇಟೆ 1.34 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 0.20 ಇಂಚು ಮಳೆಯಾಗಿದೆ.

ತಾಲೂಕು ಸರಾಸರಿಯಲ್ಲೂ ಹೆಚ್ಚಳ

ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಈ ಅವಧಿಯವರೆಗೆ 56.4 ಇಂಚು ಮಳೆಯಾಗಿದೆ. ಕಳೆವ ವರ್ಷ ಇದೇ ಅವಧಿಯಲ್ಲಿ 22.78 ಇಂಚು ಮಾತ್ರ ಮಳೆಯಾಗಿತ್ತು. ಕಳೆವ ವರ್ಷಕ್ಕೆ ಹೋಲಿಸಿದರೆ, ತಾಲೂಕಿನಲ್ಲಿ ಈ ಬಾರಿ 33.70 ಇಂಚು ಅಧಿಕ ಮಳೆಯಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿಯೂ ಜನವರಿಯಿಂದ ಈ ತನಕ 39.99 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ 17.06 ಇಂಚು ಮಾತ್ರವಾಗಿದ್ದು, ಈ ಬಾರಿ ತಾಲೂಕಿನಲ್ಲಿ 22.93 ಇಂಚಿನಷ್ಟು ಅಧಿಕ ಮಳೆ ದಾಖಲಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಜನವರಿಯಿಂದ ಜೂನ್ 16ರ ತನಕ 31.25 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಈ ಅವಧಿಯಲ್ಲಿ 14.84 ಇಂಚು ಮಳೆಯಾಗಿತ್ತು. ಈ ತಾಲೂಕಿನಲ್ಲಿಯೂ ಕಳೆದ ವರ್ಷಕ್ಕಿಂತ 16.41 ಇಂಚು ಅಧಿಕ ಮಳೆಯಾಗಿರುವದು ಜಿಲ್ಲಾಡಳಿತದ ಅಂಕಿ ಅಂಶದಿಂದ ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ದಾಖಲಾಗಿರುವ ಮಳೆ ವಿವರ ಇಂತಿದೆ.

ಮಡಿಕೇರಿ ಕಸಬಾ 0.52, ನಾಪೋಕ್ಲು 2.04, ಸಂಪಾಜೆ 1.20, ಭಾಗಮಂಡಲ 1.80, ವೀರಾಜಪೇಟೆ ಕಸಬಾ 0.94, ಹುದಿಕೇರಿ 1.34, ಶ್ರೀಮಂಗಲ 2.59, ಪೊನ್ನಂಪೇಟೆ 1.74, ಅಮ್ಮತಿ 0.92, ಬಾಳಲೆ

0.52, ಸೋಮವಾರಪೇಟೆ ಕಸಬಾ 0.02, ಶನಿವಾರಸಂತೆ 0.18, ಶಾಂತಳ್ಳಿ 0.50, ಸುಂಟಿಕೊಪ್ಪ 0.28, ಕುಶಾಲನಗರ 0.04 ಇಂಚು ಮಳೆಯಾಗಿದೆ.

ಹಾರಂಗಿ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2828.65 ಅಡಿಗಳು, ಕಳೆದ ವರ್ಷ ಇದೇ ದಿನ 2813.95 ಅಡಿ. ಇಂದಿನ ನೀರಿನ ಒಳ ಹರಿವು 914 ಕ್ಯೂಸೆಕ್ಸ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1112 ಕ್ಯೂಸೆಕ್ಸ್. ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯೂಸೆಕ್ಸ್.

ಕುಶಾಲನಗರ: ಕುಶಾಲನಗರದ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಕಂಡುಬಂದಿದ್ದು ನದಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸಿದೆ. ಕಳೆದ 1 ವಾರದ ಅವಧಿಯಲ್ಲಿ ರಭಸದಿಂದ ಸುರಿದ ಮಳೆಯಿಂದ ನದಿ ತೊರೆಗಳು ತುಂಬಿ ಹರಿದು ಹೊಲ ಗದ್ದೆಗಳು ನೀರಿನಿಂದ ಆವೃತ್ತಗೊಂಡಿದ್ದವು.

ಮಳೆ ಇಳಿಮುಖ

ವೀರಾಜಪೇಟೆ: ವೀರಾಜಪೇಟೆ ವಿಭಾಗದಲ್ಲಿ ನಿನ್ನೆಯಿಂದಲೇ ಮಳೆ ಇಳಿಮುಖಗೊಂಡಿದೆ. ಬೇತ್ರಿ ಗ್ರಾಮದ ಕಾವೇರಿ ಹೊಳೆಯ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಕದನೂರು, ಆರ್ಜಿ, ಪೆರುಂಬಾಡಿ, ಬಿಟ್ಟಂಗಾಲದಲ್ಲಿ ಗದ್ದೆಗಳು ಜಲಾವೃತಗೊಂಡಿದ್ದು ನೀರು ನಿಧಾನವಾಗಿ ಇಳಿಮುಖಗೊಳ್ಳುತ್ತಿದ್ದು ಗದ್ದೆ ಕೆಲಸಕ್ಕೆ ಸುಗುಮವಾಗಿದೆ.

ಇಂದು ವಿಭಾಗದಲ್ಲಿ ಬಿಸಿಲಿನ ವಾತಾವರಣ ಉಂಟಾಗಿದೆ. ನಿನ್ನೆ ಬೆಳಗಿನಿಂದ ಇಂದು ಬೆಳಗ್ಗಿನ 8ಗಂಟೆಯವರೆಗೆ ಒಟ್ಟು 0.95 ಇಂಚು ಮಳೆ ಸುರಿದಿದೆ.